ಹಣಕ್ಕಾಗಿ ಯುವಕನ ಅಪಹರಣ, ನಾಲ್ವರ ಸೆರೆ: ರಿಯಲ್​ಎಸ್ಟೆಟ್ ವಿಚಾರದಲ್ಲಿ ಜಗಳ, 10 ಲಕ್ಷ ರೂ. ಕೊಡುವಂತೆ ಬೆದರಿಕೆ

Arrest 20 MAR 20
Published on

ಬೆಂಗಳೂರು: ರಿಯಲ್​ಎಸ್ಟೇಟ್ ಉದ್ಯಮಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಆತನ ಮಗನನ್ನು ಅಪಹರಿಸಿ ಬೆದರಿಸಿದ್ದ ನಾಲ್ವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆ ನಿವಾಸಿ ನಿಖಿಲ್ (22) ಅಪಹರಣಕ್ಕೊಳಗಾದವ. ತಿಮ್ಮರಾಜು, ರಮೇಶ್, ನರಸಿಂಹಯ್ಯ, ಮನೋಜ್ ಬಂಧಿತರು. ಬಿ.ಇ. ಪದವೀಧರ ನಿಖಿಲ್ ತಂದೆ ರಂಗಸ್ವಾಮಿ ರಿಯಲ್​ಎಸ್ಟೇಟ್ ವ್ಯವಹಾರ ಮಾಡುತ್ತಾರೆ. 2 ತಿಂಗಳ ಹಿಂದೆ ರಂಗಸ್ವಾಮಿ ಮನೆ ಪಕ್ಕದಲ್ಲಿದ್ದ 5 ಅಡಿ ಜಾಗವನ್ನು 1.5 ಲಕ್ಷ ರೂ.ಗಳಿಗೆ ತಿಮ್ಮರಾಜು ಎಂಬಾತನಿಂದ ಖರೀದಿಸಿದ್ದರು. ತಿಮ್ಮರಾಜು ಆಗಾಗ ಮನೆ ಬಳಿ ಬಂದು, 5 ಅಡಿ ಜಾಗದ ಬಾಬ್ತು 10 ಲಕ್ಷ ರೂ. ಕೊಡಬೇಕು ಎಂದು ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.

ಕಾರಿನಲ್ಲಿ ಅಪಹರಣ: ಏ.14ರಂದು ಮನೋಜ್ ತನ್ನ ಸಹಚರರ ಜತೆ ಬಂದು ಆಂಧ್ರಹಳ್ಳಿಯಲ್ಲಿ ಸೈಟ್ ಮಾರಾಟಕ್ಕಿದೆ ಎಂದು ಹೇಳಿದ್ದ. ತಂದೆ ಮನೆಯಲ್ಲಿ ಇಲ್ಲ ಎಂದು ನಿಖಿಲ್ ಉತ್ತರಿಸಿದ್ದ. ಮನೋಜ್ ಜತೆ ಮನೆಯ ಕೆಳಗೆ ಬಂದು ಮಾತನಾಡುತ್ತಿದ್ದಾಗ, ತಿಮ್ಮರಾಜು ತನ್ನ ಸಹಚರರೊಂದಿಗೆ ಬಂದು ಕಾರಿನಲ್ಲಿ ಬಲವಂತವಾಗಿ ನಿಖಿಲ್​ನನ್ನು ಅಪಹರಿಸಿದ್ದರು. ನಂತರ ಸೊಲ್ಲಾಪುರದಮ್ಮ ದೇವಾಲಯದ ಬಳಿ ಇರುವ ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ನಿಮ್ಮ ತಂದೆ ಕೊಡಬೇಕಿರುವ 10 ಲಕ್ಷ ರೂ. ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದರು. ತಂದೆ ರಂಗಸ್ವಾಮಿಗೆ ನಿಖಿಲ್ ಕರೆ ಮಾಡಿ ವಿಚಾರ ತಿಳಿಸಿದಾಗ, 20 ದಿನಗಳಲ್ಲಿ 10 ಲಕ್ಷ ರೂ. ಕೊಡುವುದಾಗಿ ತಿಳಿಸಿದ್ದರು. ಇದಾದ ಬಳಿಕ ಆರೋಪಿಗಳು ನಿಖಿಲ್​ನನ್ನು ಬಿಟ್ಟು ಕಳುಹಿಸಿದ್ದರು. ನಂತರ ನಿಖಿಲ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net