

ವಿಜಯಪುರ: ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಕ್ಫ್ ವಿರೋಧಿ ಹೋರಾಟಕ್ಕೆ ಇದೀಗ ಮಠಾಧೀಶರು ಹಾಗೂ ರೈತರ ಹೋರಾಟ ಮತ್ತಷ್ಟು ಬಲ ತುಂಬಿದೆ.
ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಹೊನವಾಡದಿಂದ ಆರಂಭವಾದ ವಕ್ಫ್ ವಿವಾದ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರದ ನಿದ್ದೆ ಗೆಡಿಸಿತ್ತು. ಪರ-ವಿರೋಧದ ಚರ್ಚೆ ನಡುವೆಯೇ ರೈತರು ವಕ್ಪ್ ಕಾಯ್ದೆಯನ್ನೇ ರದ್ದು ಮಾಡಬೇಕೆಂಬ ಗಟ್ಟಿ ಧ್ವನಿ ಮೊಳಗಿಸಿದ್ದು, ಈ ರೈತರ ಹೋರಾಟಕ್ಕೆ ಭಾರತೀಯ ಕಿಸಾನ್ ಸಂಘ ಹಾಗೂ ವಿಶ್ವ ಹಿಂದು ಪರಿಷತ್ ಮತ್ತಷ್ಟು ಚುರುಕು ನೀಡಿದೆ.
ಈಗಾಗಲೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮತ್ತು ಅಖಂಡ ಕರ್ನಾಟಕ ರೈತ ಸಂಘ ಸೇರಿದಂತೆ ಅನೇಕ ರೈತ ಸಂಘಟನೆಗಳ ಪದಾಧಿಕಾರಿಗಳು ನಡೆಸಿದ್ದ ಅಹೋರಾತ್ರಿ ಧರಣಿ, ಕರಾಳ ದೀಪಾವಳಿ ಆಚರಣೆಗೆ ರಾಜ್ಯ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದರಲ್ಲದೇ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂಬ ಭರವಸೆ ಮೇರೆಗೆ ಹೋರಾಟ ಕೈ ಬಿಡಲಾಗಿತ್ತು. ಆದರೆ, ಇದೀಗ ಭಾರತೀಯ ಕಿಸಾನ್ ಸಂಘ, ವಿಶ್ವ ಹಿಂದು ಪರಿಷತ್ ನೇತೃತ್ವ ನಡೆದ ಬೃಹತ್ ಹೋರಾಟಕ್ಕೆ ನಾಡಿನ ವಿವಿಧ ಮಠಾಧೀಶರು ಬೆಂಬಲ ಸೂಚಿಸಿದ್ದು, ವಕ್ಫ್ ಕಾಯ್ದೆಯನ್ನೇ ರದ್ದುಗೊಳಿಸಬೇಕೆಂದು ಒಕ್ಕೊರಲಿನಿಂದ ಸಂದೇಶ ರವಾನಿಸಿದ್ದಾರೆ.
ಸೋಮವಾರ ವಿಜಯಪುರದ ಐತಿಹಾಸಿಕ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಮಠಾಧೀಶರು ಮತ್ತು ರೈತರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನೇತೃತ್ವ ವಹಿಸಿದ್ದರು. ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ, ಪಂಚಮಸಾಲಿ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು, ಯರನಾಳ ವಿರಕ್ತಮಠದ ಶ್ರೀ ಗುರು ಸಂಗನಬಸವ ಶಿವಾಚಾರ್ಯರು, ಬುರಾಣಪುರದ ಮಾತಾ ಯೋಗೇಶ್ವರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಎಸ್. ಪಾಟೀಲ ಕುಚಬಾಳ, ಅರುಣ ಶಹಾಪುರ, ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಉಮೇಶ ಕೋಳಕೂರ ಮತ್ತಿತರರಿದ್ದರು. ಬಳಿಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.