ಮನೆಯ ಟೆರೇಸ್​ ಮೇಲೆ ಪೆಟ್ರೋಲ್​ ಬಾಂಬ್​ ಪತ್ತೆಯಾದ ಬೆನ್ನಲ್ಲೇ ನಾಪತ್ತೆಯಾದ ತಾಹಿರ್​ ಹುಸೇನ್​; ಪೊಲೀಸರಿಂದ ಹುಡುಕಾಟ

Tahir hussain 29 Feb 20
Published on

ನವದೆಹಲಿ: ದೆಹಲಿ ಹಿಂಸಾಚಾರದಲ್ಲಿ, ಗುಪ್ತಚರ ದಳ ಅಧಿಕಾರಿ ಅಂಕಿತ್​ ಶರ್ಮಾ ಸಾವಿನಲ್ಲಿ ಪ್ರಮುಖವಾಗಿ ಕೇಳಿಬಂದ ಹೆಸರು ಆಪ್​ ಕೌನ್ಸಿಲರ್​ ಮಹಮ್ಮದ್​ ತಾಹಿರ್​ ಹುಸೇನ್​ದು. ತಾಹೀರ್​ ಮನೆಯ ಟೆರೇಸ್​ ಮೇಲೆ ಕಲ್ಲು, ಪೆಟ್ರೋಲ್​ ಬಾಂಬ್​ಗಳು ಸೇರಿ ಹಲವು ಮಾರಕ ಅಸ್ತ್ರಗಳು ಪತ್ತೆಯಾಗಿದ್ದವು. ಇದೆಲ್ಲದರ ಬೆನ್ನಲ್ಲೇ ಆಮ್​ ಆದ್ಮಿ ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿತ್ತು.

ತಮ್ಮ ಮಗನ ಸಾವಿನಲ್ಲಿ ತಾಹೀರ್ ಹುಸ್ಸೇನ್​ ಕೈವಾಡವಿದೆ ಎಂದು ಅಂಕಿತ್​ ಶರ್ಮಾ ತಂದೆ ರೋಹಿತ್​ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತಾಹಿರ್​ ಹುಸೇನ್​ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಆದರೆ ತಾಹೀರ್​ ಈಗ ನಾಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ತಾಹಿರ್​ ಹುಸೇನ್​ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ತಮ್ಮ ಕುಟುಂಬದ ಜತೆಯಲ್ಲೇ ಪರಾರಿಯಾಗಿದ್ದಾರೆ. ಮೊಬೈಲ್​ ಸ್ವಿಚ್​ಆಫ್​ ಮಾಡಿಕೊಂಡಿದ್ದಾರೆ. ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಕೊನೇ ಬಾರಿ ಅವರು ತಮ್ಮ ಮೊಬೈಲ್​ ಆಪರೇಟ್​ ಮಾಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ದಯಾಳ್​ಪುರ ಠಾಣೆಯಲ್ಲಿ ತಾಹೀರ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ನಾಪತ್ತೆಯಾಗಿರುವ ತಾಹಿರ್​ನನ್ನು ಭಯೋತ್ಪಾದನಾ ನಿಗ್ರಹ ದಳ, ಸ್ಪೆಷಲ್​ ಸೆಲ್​ ಸೇರಿ ಒಟ್ಟು ಐದು ಪೊಲೀಸ್ ತಂಡಗಳು ಹುಡುಕುತ್ತಿದ್ದು, ದೆಹಲಿ, ಉತ್ತರಪ್ರದೇಶ ಮತ್ತು ಸುತ್ತಲಿನ ರಾಜ್ಯಗಳ ಪ್ರಮುಖ ಅಡಗುತಾಣಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಗೆ ಗನ್​ ತೋರಿಸಿದ ಶಾರುಖ್​ನನ್ನೂ ಕೂಡ ಪೊಲೀಸರು ಹುಡುಕುತ್ತಿದ್ದಾರೆ. ಈತ ಮಾದಕವಸ್ತು ಮಾರಾಟದಲ್ಲಿ ತೊಡಗಿಕೊಂಡಿರುವ ಕುಟುಂಬಕ್ಕೆ ಸೇರಿದವ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net