

ನವದೆಹಲಿ: ದೆಹಲಿ ಮದ್ಯ ನೀತಿ ಕೇಸ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮಾ.21ರ ತಡರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿತು. ಈ ಹಿನ್ನೆಲೆ ಇಡಿ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಸಹ ಕೇಜ್ರಿವಾಲ್ ಹಿಂಪಡೆದಿದ್ದರು. ಇದೀಗ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಬಂಧನದ ಬಳಿಕ 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಇರುವ ತಿಹಾರ್ ಜೈಲಿನ ಆಡಳಿತವು ಇಂದು ಅವರ ಕುರಿತು ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ. ಏಪ್ರಿಲ್ 1ರಂದು ಅವರನ್ನು ಜೈಲಿಗೆ ಕಳುಹಿಸಿದಾಗಿನಿಂದ ಪ್ರತಿದಿನ ಅಪ್ಡೇಟ್ ಪಡೆಯುತ್ತಿರುವ ಅಧಿಕಾರಿಗಳು, ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ ಕೇಜ್ರಿವಾಲ್ ಅವರ ದೇಹದ ತೂಕ ಜೈಲು ಸೇರಿದಾಗಿನಿಂದಲೂ ಬದಲಾಗಿಲ್ಲ. ಜೈಲಿನಲ್ಲಿದ್ದಾಗಿನಿಂದ 65 ಕೆಜಿ ತೂಕವನ್ನೇ ಹೊಂದಿದ್ದಾರೆ. ಅದರಲ್ಲಿ ಬದಲಾವಣೆ ಆಗಿಲ್ಲ ಎಂದಿದ್ದಾರೆ.
ಮಾರ್ಚ್ 21ರಂದು ಬಂಧಿಸಲ್ಪಟ್ಟ ನಂತರ 12 ದಿನಗಳಲ್ಲಿ ಸಿಎಂ ಕೇಜ್ರಿವಾಲ್ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಎಎಪಿ ಸಚಿವ ಅತಿಶಿ ಹೇಳಿದ್ದಾರೆ. ಅವರ ಪ್ರಕಾರ, ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿದಾಗ ಎಎಪಿ ಮುಖ್ಯಸ್ಥರು 69.5 ಕೆಜಿ ತೂಕವಿದ್ದರು ಎಂದು ಹೇಳಲಾಗಿದೆ,(ಏಜೆನ್ಸೀಸ್).