

ಬೆಂಗಳೂರು: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರನೊಬ್ಬನ ಬಳಿ ಅವಹೇಳನಕಾರಿಯಾಗಿ ಜಾತಿಯನ್ನು ನಿಂದಿಸಿ ಮಾತನಾಡಿದ ಪ್ರಕಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಶಾಸಕನನ್ನು ಬಂಧಿಸಬೇಕು ಎಂದು ಎಎಪಿಯ ಬೆಂಗಳೂರು ನಗರ ಘಟಕ ಅಧ್ಯಕ್ಷ ಡಾಕ್ಟರ್ ಸತೀಶ್ ಕುಮಾರ್ ಆಗ್ರಹಿಸಿದರು.
ಮುನಿರತ್ನಂ ನಾಯ್ಡು ಹಿನ್ನೆಲೆ ಗಮನಿಸಿದಾಗ ಈತ ಅನೇಕ ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿ ಅನೇಕ ಅವ್ಯವಹಾರಗಳಲ್ಲಿ ಪಾಲ್ಗೊಂಡು ಕಾರ್ಪೊರೇಟರ್ ನಂತರ ಶಾಸಕನಾಗಿರುವ ಕರಾಳ ಇತಿಹಾಸ ಈತನದಾಗಿದ್ದು, ಈಗ ಪರಿಶಿಷ್ಟ ಜಾತಿಗೆ ಅಪಮಾನವಾಗುವ ರೀತಿಯಲ್ಲಿ ಹಾಗೂ ಆ ಗುತ್ತಿಗೆದಾರನ ಕುಟುಂಬದವರ ಮೇಲೂ ಸಹ ಅಶ್ಲೀಲ ಪದಗಳಿಂದ ಮಾತನಾಡಿರುವುದು ಈತ ಯಾವುದೇ ನಾಗರಿಕ ಸಮಾಜಕ್ಕೆ ಅರ್ಹನಲ್ಲನೆಂಬುದು ಸಾಬೀತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಮುನಿರತ್ನಂ ವಿರುದ್ಧ ಕೇವಲ ಮೊಕದ್ದಮೆಯನ್ನು ಮಾತ್ರ ದಾಖಲಿಸಿಕೊಂಡರೆ ಸಾಲದು ಕೂಡಲೇ ಈತನನ್ನು ಬಂಧಿಸಿ ಕಾನೂನು ಬಾಹಿರ ಹಾಗೂ ಅನೈತಿಕ, ಅಕ್ರಮ ,ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.