

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ತೀವ್ರ ಪ್ರಚಾರದಲ್ಲಿ ತೊಡಗಿಕೊಂಡಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಮೊನ್ನೆ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಎದುರು ನಡೆದ ಗುಂಡಿನ ದಾಳಿಯನ್ನು ಬಿಜೆಪಿಗೆ ತಳುಕು ಹಾಕಿ ಪ್ರಚಾರ ಮಾಡಿದ್ದಾರೆ.
"ನಾವು ವಿದ್ಯೆ ಕಲಿಯಲಿ ಎಂದು ಪೆನ್ನು, ಕಂಪ್ಯೂಟರ್ ಕೊಡುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಕನಸು ಬಿತ್ತುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದರೆ ಅವರು ಗನ್ ಕೊಡುತ್ತಿದ್ದಾರೆ. ದೆಹಲಿಯ ಜನರಿಗೆ ಗನ್ ಬೇಕೋ ಅಥವಾ ಪೆನ್ ಬೇಕೋ ಎನ್ನುವುದನ್ನು ಫೆಬ್ರವರಿ 8ರಂದು ಅವರೇ ನಿರ್ಧರಿಸಲಿ" ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ದೆಹಲಿಯ ಶಾಲೆಯೊಂದರ ವಿದ್ಯಾರ್ಥಿ ಐಟಿ ಟೆಕ್ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ವಿಡಿಯೋ ಶೇರ್ ಮಾಡಿರುವ ಕೇಜ್ರಿವಾಲ್ ತಮಗೂ ಮತ್ತು ಬಿಜೆಪಿಗೂ ಇರುವ ವ್ಯತ್ಯಾಸವಿದು ಎನ್ನುವರ್ಥದಲ್ಲಿ ಮಾತನಾಡಿದ್ದಾರೆ.
ಮೊನ್ನೆ (ಜ.29) ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ನುಗ್ಗಿದ 17 ವರ್ಷದ ವಿದ್ಯಾರ್ಥಿಯೊಬ್ಬ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ. "ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ" ಎಂದು ಕೂಗುತ್ತಾ ಗುಂಡು ಹಾರಿಸಿದ್ದ ವಿದ್ಯಾರ್ಥಿ ಉತ್ತರ ಪ್ರದೇಶ ಮೂಲದವನಾಗಿದ್ದು, ಬೆಳಿಗ್ಗೆ ಶಾಲೆಗೆ ತೆರಳುತ್ತೇನೆ ಎಂದು ಮನೆಯಿಂದ ಹೊರಟವನು ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ. ಪೊಲೀಸರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿರುವುದರಿಂದಾಗಿ ಅನೇಕರು ಈ ದುಷ್ಕೃತ್ಯದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಸದ್ಯ ಯುವಕನನ್ನು ಪೊಲೀಸರು ಯುವಕನನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)