ಅಂತಿಮ ಪರೀಕ್ಷೆ ಬೇಕಿಲ್ಲ; ಸುಪ್ರೀಂಕೋರ್ಟ್​ ಮೊರೆ ಹೋಗಿದ್ಯಾರು? ದೇಶಾದ್ಯಂತ ರದ್ದಾಗುತ್ತಾ ಎಕ್ಸಾಂ?

exam
Published on

ಮುಂಬೈ: ಅಂತಿಮ ಸೆಮಿಸ್ಟರ್​ನ ಪರೀಕ್ಷೆ ನಡೆಸಲೇಬೇಕು ಯುಜಿಸಿ ಪಟ್ಟು ಹಿಡಿದಿದೆ. ಆದರೆ, ಕೋವಿಡ್​ ಸಂಕಷ್ಟದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂಬುದು ಇದನ್ನು ವಿರೋಧಿಸುತ್ತಿರುವವರ ವಾದ.

ಈ ಹಗ್ಗಜಗ್ಗಾಟವೀಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಅಂತಿಮ ಸೆಮಿಸ್ಟರ್​ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಪರೀಕ್ಷೆ ನಡೆಸಬೇಕೆಂಬ ಯುಜಿಸಿ ನಿರ್ದೇಶನದ ವಿರುದ್ಧ ಶಿವ ಸೇನೆಯ ಯುವ ಘಟಕದ ಅಧ್ಯಕ್ಷ ಹಾಗೂ ಸಂಪುಟ ಸಚಿವ ಆದಿತ್ಯ ಠಾಕ್ರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಪರೀಕ್ಷೆ ನಡೆಸಬೇಡಿ ಎಂದು ಕೇಂದ್ರ ಮಾನ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಎರಡು ಪತ್ರ ಕಳುಹಿಸಿದ್ದೇವೆ. ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಆದಿತ್ಯ ಠಾಕ್ರೆ ಅವರ ನಿರ್ದೇಶನದ ಮೇರೆಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಯುವ ಸೇನೆ ಪ್ರಧಾನ ಕಾರ್ಯದರ್ಶಿ ವರುಣ್​ ಸರ್ದೇಸಾಯಿ ಹೇಳಿದ್ದಾರೆ.

ಶೈಕ್ಷಣಿಕ ಸಾಧನೆಯನ್ನು ಒಂದೇ ಪರೀಕ್ಷೆಯ ಆಧಾರದಲ್ಲಿ ನಿರ್ಧರಿಸಬೇಕಿಲ್ಲ. ಎಲ್ಲ ಪರೀಕ್ಷೆಯ ಒಟ್ಟು ಶ್ರೇಣಿಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ನಂಬಿಕೆಯಾಗಿದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಚ್ಛಿಸಿದರೆ ಕೋವಿಡ್​ ಸಂಕಷ್ಟದ ನಂತರ ಅದಕ್ಕೆ ಅವಕಾಶ ದೊರೆಯಲಿ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ಇಂಥ ಸಂಕಷ್ಟದ ಸಮಯದಲ್ಲಿ ಹೊರಡಿಸಿರುವ ಯುಜಿಸಿಯ ವಿಚಿತ್ರ ಆದೇಶದಿಂದಾಗಿ ಪರೀಕ್ಷೆ ಬರೆಯಲೇಬೇಕಾದ ಒತ್ತಡಕ್ಕೆ ಒಳಗಾಗಿರುವ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಪರವಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಆದಿತ್ಯ ಹೇಳಿದ್ದಾರೆ.

ಒಂದು ವೇಳೆ ಪರೀಕ್ಷೆ ನಡೆಸುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್​ ಆದೇಶ ನೀಡಿದ್ದೇ ಆದಲ್ಲಿ ದೇಶಾದ್ಯಂತ ಅಂತಿಮ ಸೆಮಿಸ್ಟರ್​ ಪರೀಕ್ಷೆಗಳು ರದ್ದಾಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net