ಆಧಾರ್ ತಿದ್ದುಪಡಿ ಕೇಂದ್ರಕ್ಕೆ ಬೀಗ ಜಡಿದ ಸಿಬ್ಬಂದಿ; ಪರದಾಡುತ್ತಿರುವ ಸಾರ್ವಜನಿಕರು

13-RNR-01
Published on

ರಾಣೆಬೆನ್ನೂರ: ಆಧಾರ್ ಕಾರ್ಡ್ ತಿದ್ದುಪಡಿಗಾಗಿ 250 ರೂ. ವಸೂಲಿ ಮಾಡುತ್ತಿದ್ದ ನಗರದ ಬಿಎಸ್‌ಎನ್‌ಎಲ್ ಕಚೇರಿಯ ಆವರಣದಲ್ಲಿದ್ದ ಗ್ರಾಹಕರ ಸೇವಾ ಕೇಂದ್ರಕ್ಕೆ ಸಿಬ್ಬಂದಿ ಎರಡು ದಿನದಿಂದ ಬೀಗ ಜಡಿದಿದ್ದಾರೆ.
ಗ್ರಾಹಕರ ಸೇವಾ ಕೇಂದ್ರದ ಸಿಬ್ಬಂದಿ ಸರ್ಕಾರ ನಿಗದಿ ಪಡಿಸಿದ ಹಣದಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಕುರಿತು ವಿಡಿಯೋ ವೈರಲ್‌ಆದ ಹಿನ್ನೆಲೆಯಲ್ಲಿ ವಿಜಯವಾಣಿ ಪತ್ರಿಕೆ ಸೆ. 12ರಂದು ಆಧಾರ್ ತಿದ್ದುಪಡಿಗೆ ಹಣ ವಸೂಲಿ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಎರಡು ದಿನದಿಂದ ಬಂದ್…
ಸುದ್ದಿ ಬರುತ್ತಿದ್ದಂತೆ ಗ್ರಾಹಕರ ಸೇವಾ ಕೇಂದ್ರದ ಸಿಬ್ಬಂದಿ ಸೇವಾ ಕೇಂದ್ರಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಆಧಾರ್ ತಿದ್ದುಪಡಿ ಮಾಡಲು ತೀವ್ರ ತೊಂದರೆ ಉಂಟಾಗಿದೆ. ರಾಣೆಬೆನ್ನೂರ ನಗರದಲ್ಲಿ ಆಧಾರ್ ತಿದ್ದುಪಡಿಗೆ ಇದೊಂದೇ ಕೇಂದ್ರ ಇರುವುದರಿಂದ ಎಲ್ಲರೂ ಇಲ್ಲಿಯೆ ಬಂದು ತಿದ್ದುಪಡಿ ಮಾಡಿಸಬೇಕು. ಇದೀಗ ಕೇಂದ್ರ ಬಂದ್ ಆಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಆದ್ದರಿಂದ ಸೇವಾ ಕೇಂದ್ರದ ಹಿರಿಯ ಅಧಿಕಾರಿಗಳು ಹಾಗೂ ತಹಸೀಲ್ದಾರ್‌ರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಪುನಃ ಸೇವಾ ಕೇಂದ್ರ ಆರಂಭಿಸಬೇಕು. ಅಲ್ಲದೆ ಸರ್ಕಾರ ನಿಗದಿ ಪಡಿಸಿದ ಹಣ ತೆಗೆದುಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಸಿಬ್ಬಂದಿ ನೇಮಕ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net