

ಬೆಂಗಳೂರು: ಕನ್ನಡದ ಜನಪ್ರಿಯ ಕಿರುತೆರೆ ವಾಹಿನಿ ಜೀ಼ ಕನ್ನಡದಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿರುವ 'ಮಹರ್ಷಿವಾಣಿ' ಕಾರ್ಯಕ್ರಮ ಯಶಸ್ವಿಯಾಗಿ 7 ವರ್ಷ ಪೂರೈಸಿದೆ.
ಪ್ರತಿನಿತ್ಯ ಬೆಳಗ್ಗೆ 8ರಿಂದ 9.30ರ ವರೆಗೆ ಪ್ರಸಾರವಾಗುವ ಮಹರ್ಷಿವಾಣಿ ಪ್ರೇಕ್ಷಕರ ಧ್ವನಿಯಾಗಿದೆ. ದೇಶದ ಮೂಲೆ ಮೂಲೆಗಳಿಂದ ಜನರು ಕೇಳುವ ಪ್ರಶ್ನೆಗಳಿಗೆ ಆನಂದ್ ಗುರೂಜಿ ಉತ್ತರ ನೀಡುತ್ತಿದ್ದು, ಜೀ಼ ಕನ್ನಡದ ಅಸಂಖ್ಯ ವೀಕ್ಷಕರು ಗುರೂಜಿ ಜತೆ ಮಾತನಾಡಲು ಉತ್ಸುಕರಾಗಿರುತ್ತಾರೆ. ಇದುವರೆಗೂ 2,5೦0ಕ್ಕೂ ಹೆಚ್ಚು ಸಂಚಿಕೆ ನಡೆಸಿಕೊಟ್ಟಿರುವ ಡಾ.ಮಹರ್ಷಿ ಆನಂದ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಸಂಖ್ಯ ಜನರು ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದಾರೆ. 7೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವ ಗುರೂಜಿ ಅವರ ಕುರಿತು ಆರರಿಂದ ಅರವತ್ತರ ಎಲ್ಲರಿಗೂ ಪ್ರೀತಿ.
ಡಾ.ಮಹರ್ಷಿ ಆನಂದ್ ಗುರೂಜಿ ಅವರು ಸಾಮೂಹಿಕ ಯಾಗ, ಪೂಜೆಗಳನ್ನು ಸತತ ಏಳು ವರ್ಷಗಳಿಂದ ನಡೆಸುತ್ತ ಬಂದಿದ್ದಾರೆ. ಅದೇ ರೀತಿ ಜನರ ಆರೋಗ್ಯ ಸಮಸ್ಯೆ, ಕೋವಿಡ್ ಸಾಂಕ್ರಾಮಿಕ ರೋಗ ಬೇಗ ನಿವಾರಣೆಯಾಗಿ ಜನರ ಬದುಕು ಸಹಜ ಸ್ಥಿತಿಗೆ ಮರಳಲಿ ಎಂಬ ಸದುದ್ದೇಶದಿಂದ ಜೂ.24ರಂದು ಗುರೂಜಿ ಅವರ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥ ಧನ್ವಂತರಿ ಮಹಾಯಾಗ ಹಮ್ಮಿಕೊಂಡಿದ್ದಾರೆ.
ಜನರಿಗೆ ಸಾಂತ್ವನ ಹೇಳುವ ಜತೆಗೆ ಅವರ ನೋವಿಗೆ ಧ್ವನಿಯಾಗಿ ನಿಂತಿದ್ದಾರೆ ಡಾ.ಮಹರ್ಷಿ ಆನಂದ್ ಗುರೂಜಿ. ಧಾರ್ಮಿಕ ವಿಚಾರ ಮಾತ್ರವಲ್ಲದೆ, ಕನ್ನಡಪರ ಸಂಘಟನೆ, ಹೋರಾಟ ಹಾಗೂ ರೈತ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘಟನೆಗಳ ಹೋರಾಟದಲ್ಲೂ ಪಾಲ್ಗೊಂಡು ಜನರ ನೋವಿಗೆ ಸ್ಪಂದಿಸುವ ಕ್ರಿಯಾಶೀಲರಾಗಿದ್ದಾರೆ. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾಗಿದ್ದು, ದೇವಾಲಯಗಳ ಅಭಿವೃದ್ಧಿಯಲ್ಲೂ ತೊಡಗಿದ್ದಾರೆ.