ಪೊಲೀಸರ ಬಂಧನಕ್ಕೆ ಹೆದರಿ ಯುವಕ ಆತ್ಮಹತ್ಯೆ

Crime Logo
Published on

ಬೆಂಗಳೂರು: ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕ ಪೊಲೀಸ್ ಬಂಧನ ಭೀತಿಯಿಂದ ಕಾಟನ್‌ಪೇಟೆ ಮುಖ್ಯರಸ್ತೆಯ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯಪುರ ಜಿಲ್ಲೆಯ ಶಶಿಧರ್(೨೪) ಆತ್ಮಹತ್ಯೆಗೆ ಶರಣಾದವನು. ಗಾರೆ ಕೆಲಸ ಮಾಡುತ್ತಿದ್ದ. ಶಶಿಧರ್, ತನ್ನ ಊರಿನ ಪರಿಚಿತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಾಲಕಿಯ ಪಾಲಕರು ಶಶಿಧರ್ ವಿರುದ್ಧ ಬಸವನಬಾಗೇವಾಡಿಯಲ್ಲಿ ಠಾಣೆಯಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ(ಪೋಕ್ಸೋ) ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಪೊಲೀಸರು ಬಂಧಿಸಬಹುದೆಂದು ಭಯಭೀತನಾದ ಶಶಿಧರ್ ಊರು ಬಿಟ್ಟು ಮೂರ್ನಾಲ್ಕು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಟನ್‌ಪೇಟೆ ಮುಖ್ಯರಸ್ತೆಯ ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದ ಶಶಿಧರ್, ಅಲ್ಲಿಯೇ ಮಂಗಳವಾರ ನೇಣು ಹಾಕಿಕೊಂಡಿದ್ದಾನೆ. ಶಶಿಧರ್ ಕೊಠಡಿಯಿಂದ ಹೊರಗೆ ಬಾರದ ಕಾರಣ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಠಾಣೆಗೆ ಮಾಹಿತಿ ನೀಡಿದರು. ಬಳಿಕ ಲಾಡ್ಜ್‌ಗೆ ತೆರಳಿ ಶಶಿಧರ್‌ನ ಕೊಠಡಿ ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನನ್ನ ಸಾವಿಗೆ ಬಾಲಕಿ ಮನೆಯವರೇ ಕಾರಣ:
ಶಶಿಧರ್ ಮಂಗಳವಾರ ರಾತ್ರಿ ಲಾಡ್ಜ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ವಿಡಿಯೋವೊಂದನ್ನು ಮಾಡಿ ನನ್ನ ಸಾವಿಗೆ ಬಾಲಕಿಯವರ ಮನೆಯವರೇ ಕಾರಣ ಎಂದು ಆರೋಪಿಸಿದ್ದಾನೆ. ಆ ವಿಡಿಯೋವನ್ನು ಇನ್ಸಾಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ವಿಡಿಯೋದಲ್ಲಿ ಆರು ವರ್ಷದಿಂದ ನಾವಿಬ್ಬರು ಪ್ರೀತಿ ಮಾಡುತ್ತಿದ್ದೇವು. ಇದೀಗ ಇಬ್ಬರು ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ. ಮದುವೆಯಾಗಿರುವುದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಆದರೆ ಈಗ ಜಾತಿ ಸಲುವಾಗಿ ಅವರ ಮನೆಯವರು ನನ್ನ ಮೇಲೆ ಅತ್ಯಾಚಾರದ ದೂರು ನೀಡಿದ್ದಾರೆ. ಜತೆಗೆ ನನ್ನ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ನನ್ನ ಸಾವಿಗೆ ಬಾಲಕಿ ಅಪ್ಪ, ಅಮ್ಮ ಮತ್ತು ಅವರ ತಾತಾ ಕಾರಣ, ಪೊಲೀಸರು ನನ್ನ ದೂರು ತೆಗೆದುಕೊಂಡಿಲ್ಲ, ಅವರ ವಿರುದ್ಧ ತನಿಖೆ ಮಾಡಬೇಕೆಂದು ವಿಡಿಯೋದಲ್ಲಿ ಯುವಕ ಒತ್ತಾಯಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net