

ಬೆಂಗಳೂರು: ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದ್ದ ಮಾಜಿ ಪ್ರೇಯಸಿ ವಿರುದ್ಧ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಆರ್.ಆರ್.ನಗರ ನಿವಾಸಿ ಶೆರ್ವಿನ್ ಎಂಬಾತ ನೀಡಿದ ದೂರಿನ ಮೇರೆಗೆ ಕೋಣನಕುಂಟೆ ನಿವಾಸಿ ಸಿಂಧೂರಿ ಮಾನೆ, ಆಕೆಯ ಪತಿ ಭಂಟ ಮಂಜುನಾಥ್, ಸ್ನೇಹಿತ ಸಾಗರ್ ಮಾಘನಹಳ್ಳಿ ಎಂಬುವರ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶೆರ್ವಿನ್‌ಗೆ ಒಂದೂವರೆ ವರ್ಷದ ಹಿಂದೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿ ಸಿಂಧೂರಿ ಮಾನೆ ಎಂಬಾಕೆಯ ಪರಿಚಯವಾಗಿದ್ದು, ಇಬ್ಬರು ತುಂಬಾ ಸಲುಗೆಯಿಂದ ಇದ್ದರು. ಕೆಲ ದಿನಗಳ ಹಿಂದೆ ಸಿಂಧೂರಿ ೨೦ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಶೆರ್ವಿನ್ ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಆಗ ಸಿಂಧೂರಿ, ನಮ್ಮಿಬ್ಬರ ವಿಚಾರವನ್ನು ನಿಮ್ಮ ಮನೆಯವರಿಗೆ ಹೇಳುತ್ತೇನೆ. ನಿನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಳು. ಜತೆಗೆ ಆಕೆಯ ಸ್ನೇಹಿತ ಸಾಗರ್ ಮಾಘನಹಳ್ಳಿ ಕೂಡ ಬ್ಲಾೃಕ್‌ಮೇಲ್ ಮಾಡಿದ್ದಾನೆ. ಅಲ್ಲದೆ, ಈ ವಿಚಾರಗಳನ್ನು ಸಿಂಧೂರಿ ಪತಿ ಮಂಜುನಾಥ್‌ಗೆ ತಿಳಿಸಿದಾಗ, ಆತ ಕೂಡ ಸಿಂಧೂರು ಕೇಳಿದಷ್ಟು ಹಣ ಕೊಡು, ಇಲ್ಲವಾದರೆ ಸಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶೆರ್ವಿನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
೨ ಲಕ್ಷ ರೂ ಪಡೆದಿದ್ದ ಆರೋಪಿಗಳು:
ಇಷ್ಟೇ ಅಲ್ಲದೇ ಆರೋಪಿಗಳು ೨೦೨೩ರ ಸೆ.೧೯ರಿಂದ ಅ.೩೧ರವರೆಗೆ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನು ಅಡಮಾನವಿರಿಸಿ ೨ ಲಕ್ಷ ರೂ. ಪಡೆದುಕೊಂಡಿದ್ದಾರೆ. ಬಳಿಕ ಬಾಕಿ ೧೮ ಲಕ್ಷ ರೂ. ಕೊಡಬೇಕು ಎಂದು ಶೆರ್ವಿನ್ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದರು. ಜತೆಗೆ ತನ್ನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ,ಜೈಲಿಗೆ ಕಳುಹಿಸಿದ್ದರು. ಇದೀಗ ಜೈಲಿನಿಂದ ಬಿಡುಗಡೆಯಾಗಿ ಬಂದು ಆರ್.ಆರ್.ನಗರದ ಪಿಜಿಯಲ್ಲಿ ವಾಸವಾಗಿದ್ದೆ. ಆದರೆ, ಅಲ್ಲಿಗೂ ಆರೋಪಿಗಳು ಬಂದು ಬಾಕಿ ೧೮ ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಮತ್ತೊಂದು ಸುಳ್ಳುಕೇಸ್ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶೆರ್ವಿನ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಣನಕುಂಟೆ ಪೊಲೀಸರಿಂದ ಬಂಧನ:
ಶೆರ್ವಿನ್ ಜತೆ ನಾನು ಆತ್ಮೀಯವಾಗಿ ಇದ್ದದ್ದು ನಿಜ. ಆತನ ವರ್ತನೆಯಿಂದ ಬೇಸರಗೊಂಡು ದೂರವಾಗಿದ್ದೆ. ಆದರೆ, ಆತ ಕಂಪನಿ, ಮನೆ ಬಳಿ ಬಂದು ಮತ್ತೊಮ್ಮೆ ಆತ್ಮೀಯತೆ ಮುಂದುವರಿಸುವಂತೆ ಪೀಡಿಸಿದ್ದ. ಜತೆಗೆ ನಮ್ಮಿಬ್ಬರ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಿಂಧೂರಿ ಆರೋಪಿಸಿ ಈ ಹಿಂದೆ ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಶೆರ್ವಿನ್‌ನನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.