ಭಜನೆ ಹಾಡು ಹಾಕಿದಕ್ಕೆ ಯುವಕನ ಮೇಲೆ ಹಲ್ಲೆ: ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಖಾಕಿ

arrest
Published on

ಬೆಂಗಳೂರು: ಜೋರಾಗಿ ಹಿಂದಿ ಭಜನೆ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಗ್ಯಾಂಗ್‌ವೊಂದು ಹಲ್ಲೆ ಮಾಡಿರುವ ಘಟನೆ ನಗರತ್‌ಪೇಟೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಲೇಮಾನ್, ಶಹನವಾಜ್, ರೋಹಿತ್ ಬಂಧಿತ ಆರೋಪಿಗಳು.

ನಗರತ್‌ಪೇಟೆಯಲ್ಲಿರುವ ಮೊಬೈಲ್ ಶಾಪ್‌ನಲ್ಲಿ ಭಾನುವಾರ ಸಂಜೆ ೬.೩೦ ರ ವೇಳೆ ಯುವಕ ಹಿಂದಿ ಭಾಷೆಯ ಭಜನೆ ಹಾಡುಗಳನ್ನು ಜೋರು ಸೌಂಡ್ ಇಟ್ಟು ಹಾಕಿದ್ದಾನೆ. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್ ಅವರ ಕೊರಳಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ.

ಪ್ರತಿಭಟನೆ:
ಹನುಮಾನ್ ಚಾಲೀಸಾ ಹಾಕಿದ್ದನ್ನು ಪ್ರಶ್ನಿಸಿ ಅನ್ಯಕೋಮಿನ ಯುವಕರು ಮೊಬೈಲ್ ಶಾಪ್‌ನಲ್ಲಿದ್ದ ಯುವಕನಿಗೆ ಥಳಿಸಿದ್ದರು. ಇದೀಗ ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ. ಘಟನಾ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಸ್ಥಳದಲ್ಲಿ ಹನುಮಾನ್ ಚಾಲೀಸ್ ಕೂಡ ಹಾಡಿದ್ದಾರೆ ಎಂದು ತಿಳಿದು ಬಂದಿದೆ.

ಹಲ್ಲೆಗೆ ಒಳಗಾದ ಮುಖೇಶ್ ಅವರನ್ನು ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್ ಹಾಗೂ ಶಾಸಕ ಉದಯ್ ಗರುಡಚಾರ್ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಇದೇ ವೇಳೆ ಘಟನೆ ಸಂಬಂಧ ಹಲಸೂರು ಗೇಟ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ನಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳ ಪರ ನಿಲ್ಲುವ ಕೆಲಸವಾಗುತ್ತಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಇದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ ಆಗಿದೆ. ಮೊಬೈಲ್ ಶಾಪ್‌ಗೆ ನುಗ್ಗಿ ಹಿಂದು ಯುವಕನನ್ನು ಎಳೆದಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಮುಖೇಶ್ ಹಿಂದಿ ಭಾಷೀಕನಾಗಿದ್ದು ಕನ್ನಡ ಅಷ್ಟಾಗಿ ಬರುವುದಿಲ್ಲ. ಪೊಲೀಸರು ಹನುಮನ್ ಚಾಲಿಸಾ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿಲ್ಲ. ಸರ್ಕಾರದಿಂದ ಯಾವುದೇ ಒತ್ತಡ ಬಂದರೂ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಇಡೀ ನಗರತ್‌ಪೇಟೆಯನ್ನು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು.

ಹಲ್ಲೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ:
ಹಲ್ಲೆ ಸಂಬಂಧ ಪೊಲೀಸರು ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸಂಜೆ ಮುಖೇಶ್ ಅವರ ಅಂಗಡಿ ಬಳಿ ಬಂದಿರುವ ಅನ್ಯಕೋಮಿನ ಕೆಲ ಯುವಕರು, ನಮಾಜ್ ಸಮಯದಲ್ಲಿ ಅಂಗಡಿಯಲ್ಲಿ ಜೋರಾಗಿ ಭಜನೆ ಹಾಡು ಹಾಕದಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಮುಖೇಶ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಅನ್ಯಕೋಮಿನ ಯುವಕರು ಮುಖೇಶ್‌ನನ್ನು ಅಂಗಡಿಯಿಂದ ಹೊರಗೆ ಎಳೆದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ದೃಶ್ಯ ಅಂಗಡಿ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net