

ಮಳವಳ್ಳಿ: ತಾಲೂಕಿನ ಮಾಗನೂರು ಗೇಟ್ ಬಳಿ ಇರುವ ಬಾರ್‌ವೊಂದರಲ್ಲಿ ಕುಳಿತ್ತಿದ್ದ ಯುವಕನೊಬ್ಬನ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಮೂವರಿದ್ದ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪಟ್ಟಣದ ಎನ್‌ಇಎಸ್ ಬಡಾವಣೆಯ ನಿವಾಸಿ ಮಧು ಎಂಬುವರ ಪುತ್ರ ಯೋಗೇಶ್ (26) ಕೊಲೆಯಾದ ಯುವಕ. ಈತ ಚಾಲಕ ವೃತ್ತಿ ಮಾಡಿಕೊಂಡಿದ್ದು, ಈತನ ಸ್ನೇಹಿತರೇ ಕೊಲೆ ಮಾಡಿದ್ದಾರೆಂದು ಮೃತನ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಗನೂರು ಗೇಟ್ ಬಳಿ ಇರುವ ಸಿದ್ದೇಶ್ವರ ಬಾರ್ ಒಳಗೆ ನುಗ್ಗಿದ ಮೂವರು ಯುವಕರ ಗುಂಪು ಡ್ರಾೃಗರ್ ಮತ್ತು ಲಾಂಗ್ ಹಿಡಿದು ಬಾರ್ ಒಳಗೆ ಕುಳಿತಿದ್ದ ಯೋಗೇಶ್ ಮೇಲೆ ಮನಬಂದಂತೆ ಚುಚ್ಚಿ, ಲಾಂಗ್‌ನಿಂದ ತಲೆ, ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಹೊರಗೆ ಓಡಿ ಬಂದ ಯೋಗೇಶ್ ಬಾರ್ ಮುಂಭಾಗ ತೀವ್ರ ರಕ್ತಸ್ರಾವದಿಂದ ಕುಸಿದು ಮೃತಪಟ್ಟಿದ್ದಾನೆ. ಸ್ದಳದಿಂದ ಬೈಕ್‌ವೊಂದರಲ್ಲಿ ದಾಳಿಕೋರರು ಪರಾರಿಯಾಗಿದ್ದಾರೆ. ಸುತ್ತಲಿನ ನಿವಾಸಿಗಳು ಹಾಡಹಗಲಲ್ಲೇ ಮಾರಕಾಸ್ತ್ರ ಹಿಡಿದು ಯುವಕನ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ. ಕೊಲೆ ನಡೆದಿರುವ ದೃಶ್ಯಾವಳಿಗಳು ಬಾರ್‌ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಇನ್‌ಸ್ಪೆಕ್ಟರ್ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಲೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.