ಮದುವೆ ಮಾಡಿಸಿ ಎಂದು ಪೊಲೀಸರ ಬೆನ್ನು ಬಿದ್ದ ಯುವಕ

Marrige Break
Published on

ಬೆಂಗಳೂರು: ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟು ಹೋಗಿದ್ದು, ಆ ಯುವತಿಯ ಜತೆ ನನ್ನ ಮದುವೆ ಮಾಡಿಸಿ ಎಂದು ಯುವಕನೊಬ್ಬ ಪೊಲೀಸರ ಬೆನ್ನುಬಿದ್ದಿದ್ದಾನೆ.
ಯುವತಿಯೊಬ್ಬಳು(೨೨) ಪ್ರೀತಿ ಪ್ರೇಮ ಅಂತ ನನ್ನ ಜತೆಯಾದಳು, ನಾನೂ ತೆಯಾಗಿ ನಿಂತು ಅವಳನ್ನು ಚೆನ್ನಾಗಿ ನೋಡಿಕೊಂಡೆ. ಮದುವೆ ಅಂದ ತಕ್ಷಣ ಜಾತಿಯ ನೆಪ ಹೇಳಿ ಬಿಟ್ಟೋದಳು. ಹೇಗಾದರೂ ಮಾಡಿ ಅವಳ ಜತೆ ನನ್ನ ಮದುವೆ ಮಾಡಿಸಿ ಎಂದು ತಿಲಕನಗರ ಠಾಣೆ ಪೊಲೀಸರ ಮುಂದೆ ಮಣಿಕಂಠ ಎಂಬ ಯುವಕ ಅಳಲು ತೋಡಿಕೊಂಡಿದ್ದಾನೆ.
ತಮಿಳುನಾಡು ಮೂಲದ ಮಣಿಕಂಠ ತಿಲಕನಗರದಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ದುಡಿಯೋಕೆ ಅಂತ ನಗರಕ್ಕೆ ಬಂದವನು ಎರಡು ವರ್ಷದ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದ. ಕೆಲಸ ಮಾಡುವಾಗ ಪರಿಚಯವಾದ ಕೆ.ಪಿ.ಅಗ್ರಹಾರ ನಿವಾಸಿಯಾದ ಯುವತಿಯ ಜತೆ ಪ್ರೀತಿ ಬೆಳೆಸಿಕೊಂಡಿದ್ದ. ಪ್ರೀತಿ ಮಾಡಲು ಶುರು ಮಾಡಿದ್ದಾಗಿನಿಂದ ಯುವತಿಯ ಖರ್ಚುವೆಚ್ಚದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದನಂತೆ. ಆಕೆಗೆ ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿಯ ಊಟದವರೆಗೂ ಈತನೇ ದುಡ್ಡು ಕೊಡುತ್ತಿದ್ದನಂತೆ. ಸುಮಾರು ಎರಡು ವರ್ಷ ಲಕ್ಷಾಂತರ ರೂಪಾಯಿ ಅವಳಿಗಾಗಿ ಖರ್ಚು ಮಾಡಿದ್ದೆ. ಈಗ ನನ್ನ ಜಾತಿ ಕಾರಣಕ್ಕೆ ಆಕೆ ಬಿಟ್ಟೋದಳು ಎಂದು ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾನೆ.
ಪೊಲೀಸರಿಗೆ ತಾನು ಮಾಡಿದ ಖರ್ಚಿನ ವಿವರ ಕೊಟ್ಟ:
ಮಣಿಕಂಠ ತನ್ನ ಯುವತಿಗೆ ಕೊಟ್ಟ ಹಣದ ಫೋನ್ ಪೇ ಹಿಸ್ಟರಿ ಜೆರಾಕ್ಸ್ ಪ್ರತಿ ಮಾಡಿಸಿ ಪೊಲೀಸರಿಗೆ ಸಲ್ಲಿಸಿದ್ದಾನೆ. ಅಷ್ಟೇ ಅಲ್ಲದೆ, ಯುವತಿಯ ಜತೆ ತೆಗೆಸಿದ ೆಟೋ ಮತ್ತು ಮೆಸೇಜ್ ಚಾಟಿಂಗ್ ಹಿಡಿದುಕೊಂಡು ಠಾಣೆಗೆ ಹೋಗಿದ್ದಾನೆ. ಖರ್ಚು ಮಾಡಿದ ದುಡ್ಡು ಹೋದರು ಪರವಾಗಿಲ್ಲ ನನಗೆ ನನ್ನ ಪ್ರೀತಿ ಬೇಕು ಎಂದು ಹಠ ಮಾಡಿದ್ದಾನೆ. ಯುವತಿಯ ಮನೆಯವರ ಜತೆ ಮಾತನಾಡಿ ಮದುವೆ ಮಾಡಿಸಿ ಅಂತಾ ಮಣಿಕಂಠ ಪೊಲೀಸರಿಗೆ ಗೋಗರಿದಿದ್ದಾನೆ. ಮಣಿಕಂಠನ ಒತ್ತಾಯಕ್ಕೆ ಮಣಿದ ಪೊಲೀಸರು ಮಫ್ತಿಯಲ್ಲಿ ಹೋಗಿ ಯುವತಿಯ ಕುಟುಂಬವನ್ನು ಸಂಪರ್ಕ ಮಾಡಿದ್ದಾರೆ.
ಬೇರೆ ಯುವಕನೊಂದಿಗೆ ಯುವತಿಗೆ ನಿಶ್ಚಿತಾರ್ಥ:
ಇಷ್ಟವಿಲ್ಲದಿದ್ದರೂ ಮಣಿಕಂಠ ನಮ್ಮ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂದು ತಮ್ಮನ್ನು ಸಂಪರ್ಕ ಮಾಡಿರುವ ಪೊಲೀಸರಿಗೆ ಯುವತಿಯ ಮನೆಯವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಹುಡಿಗೆಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥವಾಗಿದೆ. ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಯುವತಿಯಿಂದ ಹೇಳಿಕೆ ಪಡೆದ ಪೊಲೀಸರಿಗೆ ಯುವತಿಗೆ ಇಚ್ಛೆ ಇಲ್ಲದಿದ್ದರೂ ಯುವಕ ಹಿಂದೆ ಬಿದ್ದಿರುವುದು ಗೋಚರವಾಗಿದೆ. ಹೀಗಾಗಿ ದೂರು ಪಡೆದು, ತನಿಖೆ ಮುಕ್ತಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net