ಸಿದ್ಧಗಂಗೆಯ ತಪ್ಪಲಲ್ಲಿ ಯೋಗಾಸನ ಪ್ರದರ್ಶನ; ಯೋಗಥಾನ್‌ನಲ್ಲಿ 8 ಸಾವಿರ ಮಕ್ಕಳು !

1.ಶ್ರೀ ಸಿದ್ಧಗಂಗಾ ಮಠದ ತಪ್ಪಲಲ್ಲಿ ಆಯೋಜಿಸಿದ್ದ ವಿಶ್ವ ದಾಖಲೆಯ ಯೋಗಥಾನ್‌ನಲ್ಲಿ 8 ಸಾವಿರಕ್ಕೂ ಹೆಚ್ಚು ಮಕ್ಕಳು ಯೋಗ ಪ್ರದರ್ಶನ ನೀಡಿದರು.
1.ಶ್ರೀ ಸಿದ್ಧಗಂಗಾ ಮಠದ ತಪ್ಪಲಲ್ಲಿ ಆಯೋಜಿಸಿದ್ದ ವಿಶ್ವ ದಾಖಲೆಯ ಯೋಗಥಾನ್‌ನಲ್ಲಿ 8 ಸಾವಿರಕ್ಕೂ ಹೆಚ್ಚು ಮಕ್ಕಳು ಯೋಗ ಪ್ರದರ್ಶನ ನೀಡಿದರು.
Published on

ತುಮಕೂರು: ಹದಿಮೂರು ಶಾಲೆಗಳ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿದ್ಧಗಂಗೆಯ ತಪ್ಪಲಲ್ಲಿ ಭಾನುವಾರ ಬೆಳಗಿನ ಚುಮುಚುಮು ಚಳಿಯಲ್ಲಿಯೇ ಯೋಗಾಸನ ಪ್ರದರ್ಶನ ಮಾಡುವ ಮೂಲಕ ವಿಶ್ವದಾಖಲೆಯ ಯೋಗಥಾನ್ ಭಾಗವಾದರು.

ಸಹಸ್ರಾರು ಮಕ್ಕಳೊಂದಿಗೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಸೇರಿದಂತೆ ಯೋಗಪಟುಗಳು, ಪಾಲಕರು ಯೋಗಾಸನಗಳನ್ನು ಮಾಡಿ ಗಮನಸೆಳೆದರು.

ಸಿದ್ಧಗಂಗಾ ಮಠದ ತಪ್ಪಲಲ್ಲಿ ಆಯೋಜಿಸಿದ್ದ ವಿಶ್ವ ದಾಖಲೆಯ ಯೋಗಥಾನ್

ಕಾರ್ಯಕ್ರಮದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಜಿ.ಬಿ.ಜ್ಯೋತಿಗಣೇಶ್,

ವೈ.ಎಸ್.ಪಾಟೀಲ, ಡಾ.ಕೆ.ವಿದ್ಯಾಕುಮಾರಿ ಮತ್ತಿತರರು ಇದ್ದರು.

ಶ್ರೀ ಸಿದ್ಧಗಂಗಾ ಮಠದ ತಪ್ಪಲಲ್ಲಿ ಆಯೋಜಿಸಿದ್ದ ವಿಶ್ವ ದಾಖಲೆಯ ಯೋಗಥಾನ್‌ನಲ್ಲಿ

ಜಿ.ಬಿ.ಜ್ಯೋತಿಗಣೇಶ್, ವೈ.ಎಸ್.ಪಾಟೀಲ, ಡಾ.ಕೆ.ವಿದ್ಯಾಕುಮಾರಿ ಸೇರಿ ಅಧಿಕಾರಿಗಳು ಯೋಗಾಸನ ಮಾಡಿದರು.

ಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವಜನ ಸೇವಾ ಕ್ರೀಡಾ ಇಲಾಖೆ, ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2022 -23 ವಿಶ್ವ ದಾಖಲೆಯ ಯೋಗಥಾನ್ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನದ ಬಳಿಕ ಮಾತನಾಡಿದ ಜ್ಯೋತಿಗಣೇಶ್, ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅಂತೆಯೇ ‘ಯೋಗಥಾನ್’ ಕಾರ್ಯಕ್ರಮದ ಮೂಲಕ ಯೋಗದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.

ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿರುವ ಇಂದಿನ ವಿಶ್ವ ದಾಖಲೆಯ ಯೋಗಥಾನ್‌ನಲ್ಲಿ ನಾಡಿನೆಲ್ಲೆಡೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಭಾಗವಹಿಸಿರುವುದು ಸಂತಸ ತಂದಿದೆ. 2015ರ ಜೂನ್21 ರಂದು ವಿಶ್ವ ಯೋಗ ದಿನಾಚರಣೆ ಎಂದು ವಿಶ್ವಸಂಸ್ಥೆ ಘೋಷಿಸಿದ್ದು, ಇದರಿಂದ ಯೋಗದ ಮಹತ್ವ ಎಲ್ಲೆಡೆ ಹತ್ತು ಪಟ್ಟು ಹೆಚ್ಚಾಗಲು ಕಾರಣವಾಗಿದೆ. ವಿಶ್ವ ಸಂಸ್ಥೆ ಕೂಡ ಯೋಗಕ್ಕೆ ಮನ್ನಣೆ ನೀಡಿದೆ. ಪತಂಜಲಿ ಋಷಿಯ ಚಿಂತನೆಯ ಫಲವಾಗಿ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ ಅಭ್ಯಾಸವಾಗಿ ಬಂದಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ವೀಕ್ಷಕ ವೆಂಡಿ, ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಉತ್ತಮ ಜೀವನಕ್ಕೆ ಯೋಗ ಅವಶ್ಯ: 26ನೇ ರಾಷ್ಟ್ರೀಯ ಯುವಜನೋತ್ಸವದ ಆತಿಥ್ಯ ವಹಿಸಿರುವ ರಾಜ್ಯ ಸರ್ಕಾರವು ವಿಶೇಷವಾದ ಯೋಗಥಾನ್ ಆಯೋಜಿಸಿದೆ. ವಿಶ್ವ ದಾಖಲೆಗಾಗಿ ಯೋಗ ಒಂದು ಕಡೆಯಾದರೆ, ಆರೋಗ್ಯ, ಉತ್ತಮ ಜೀವನ, ದೀರ್ಘಾಯುಷ್ಯಕ್ಕಾಗಿ ಯೋಗ ಅತ್ಯಂತ ಅವಶ್ಯವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.

ನಮ್ಮ ಬದುಕನ್ನು ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ಹಿರಿಯರು ನಮಗೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಮುಂತಾದವುಗಳನ್ನು ಕಾಣಿಕೆಯನ್ನಾಗಿ ನೀಡಿದ್ದಾರೆ. ಯೋಗ ಇಂದಿನ ದಿನದ ಕಾರ್ಯಕ್ರಮಕ್ಕೆ ಮಾತ್ರ ಮೀಸಲಾಗದೆ, ನಮ್ಮ ಪ್ರತಿ ದಿನದ ಚಟುವಟಿಕೆಯಾಗಿ ಯೋಗಾಭ್ಯಾಸ ಆಗಲಿ. ಯೋಗದಿಂದ ಆರೋಗ್ಯವಂತ ಪ್ರಜೆಗಳಾಗಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿದ್ದಾರೆ. ಇದರಿಂದ ಯೋಗಕ್ಕೆ ಬಹಳಷ್ಟು ಮಹತ್ವ ದೊರೆತು ಯೋಗ ದಿನ ಆಚರಿಸಲಾಗುತ್ತಿದೆ. ಭಾರತೀಯರಾದ ನಾವುಗಳು ಶಿಸ್ತಿನಿಂದ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. |ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಠಾಧ್ಯಕ್ಷ, ಸಿದ್ಧಗಂಗಾ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net