

ಮುಂಬೈ: ಕರೊನಾ ವೈರಸ್ ಸಾಂಕ್ರಾಮಿಕವಾದದ್ದು, ಹಾಗಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಡಿ, ಹೊರಗಡೆ ಅನಾವಶ್ಯಕವಾಗಿ ಸುತ್ತಾಡಬೇಡಿ ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ. ನಾನು ವಿದೇಶದಿಂದ ಬಂದಿಲ್ಲ ಎನ್ನುವ ಧೈರ್ಯದಲ್ಲಿ ಕಾರ್ಯಕ್ರಮವವೊಂದರಲ್ಲಿ ಭಾಗವಹಿಸಿದ್ದ ಮಹಿಳೆಗೆ ಕರೊನಾ ವೈರಸ್ ಹರಡಿರುವುದು ಪತ್ತೆಯಾಗಿದೆ.
ಪುಣೆಯ 40 ವರ್ಷದ ಮಹಿಳೆ ವಿದೇಶಕ್ಕೆ ಹೋಗಿರಲಿಲ್ಲ. ಅವಳ ಮನೆಯ ಅಕ್ಕ ಪಕ್ಕ ಅಥವಾ ಮನೆಯಲ್ಲಿ ವಿದೇಶದಿಂದ ಪ್ರವಾಸ ಮಾಡಿ ಬಂದವರು ಇಲ್ಲ ಎನ್ನುವ ಧೈರ್ಯದಲ್ಲಿದ್ದಳು. ಅದೇ ಧೈರ್ಯದಲ್ಲಿ ಮಾರ್ಚ್ 3ರಂದು ಆಕೆ ಮುಂಬೈನ ವಾಶಿಯಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಳೆ. ಮದುವೆ ಮುಗಿಸಿ ಬಂದ ಮಹಿಳೆಗೆ ಕೆಲ ದಿನಗಳಲ್ಲಿ ಆರೋಗ್ಯ ಹದಗೆಟ್ಟಿದ್ದು, ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲದ ಕಾರಣ ಆಕೆಗೆ H1N1 ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಆಕೆಯಲ್ಲಿ ಕರೊನಾ ವೈರಸ್ ಪತ್ತೆಯಾಗಿದ್ದು, ಮುಂಬೈನ ಭಾರತೀ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದೊಂದಿಗೆ ಉಸಿರಾಡುವಂತಾಗಿದೆ.
ಮದುವೆಯಲ್ಲಿ ಯಾವುದೋ ವ್ಯಕ್ತಿಯಲ್ಲಿ ಕರೊನಾ ವೈರಸ್ ಇದ್ದು ಅವರಿಂದಲೇ ಆಕೆಗೆ ವೈರಸ್ ಹರಡಿರಬಹುದು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ನೇವಲ್ ಕಿಶೋರ್ ರಾಮ್ ತಿಳಿಸಿದ್ದಾರೆ. ಆಕೆ ಮುಂಬೈನಿಂದ ವಾಶಿಗೆ ಕ್ಯಾಬ್ನಲ್ಲಿ ಸಂಚರಿದ್ದಾಳೆ ಎನ್ನಲಾಗಿದ್ದು ಅದರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. (ಏಜೆನ್ಸೀಸ್)