ವಿಮಾನದ ಜತೆಗೆ 6 ವರ್ಷಗಳ ಲವ್, ಡೇಟಿಂಗ್​ - ಮುಂದಿನ ತಿಂಗಳೇ ಮದುವೆ ಅಂತಿದ್ದಾಳೆ ಈ ಯುವತಿ!

flight marria
Published on

ಬೆರ್ಲಿನ್​: ಮದುವೆಯಾಗಬೇಕೆಂದೆರೆ ಹೆಣ್ಣು ಗಂಡೇ ಆಗಿರಬೇಕೆಂದೇನಿಲ್ಲ. ಹೆಣ್ಣು ಹೆಣ್ಣು, ಗಂಡು-ಗಂಡು ಮದುವೆಯಾಗುವದಕ್ಕೂ ಈಗ ಅರ್ಥವಿದೆ. ಅಷ್ಟೇ ಏಕೆ, ವಿದೇಶಗಳಲ್ಲಿ ಮನುಷ್ಯರು ವಸ್ತುಗಳೊಂದಿಗೂ ಮದುವೆಯಾಗುತ್ತಾರೆ. ಈಗ ಜರ್ಮನಿಯ ಮಿಚೆಲ್​ ಕೋಬ್ಕೆ ಹೆಸರಿನ ಯುವತಿ ಕೂಡ ವಿಮಾನದ ಜತೆ ಮದುವೆಯಾಗಲು ಸಿದ್ಧಳಾಗಿದ್ದಾಳೆ.

30 ವರ್ಷದ ಮಿಚೆಲ್​ ಬೋಯಿಂಗ್​ 737-800 ವಿಮಾನವನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮಾರ್ಚ್​ 18ರಂದು ಅದರೊಂದಿಗೆ ಮದುವೆಯಾಗುವುದಾಗಿ ತಿಳಿಸಿದ್ದಾಳೆ. 2014ರಲ್ಲಿ ಮೊದಲ ಬಾರಿಗೆ ಏರ್​ಪೋರ್ಟ್​ನಲ್ಲಿ ಈ ವಿಮಾನವನ್ನು ನೋಡಿದ ಮಿಚೆಲ್​ಗೆ ಪ್ರೀತಿ ಹುಟ್ಟಿತ್ತಂತೆ. ಅದಾದ ನಂತರ ಒಂದೇ ಒಂದು ಬಾರಿ ತನ್ನ ಪ್ರಿಯತಮ ವಿಮಾನವನ್ನು ನೋಡಲು ಅವಳಿಗೆ ಅವಕಾಶ ಸಿಕ್ಕಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.

2019 ಸೆಪ್ಟೆಂಬರ್​ನಲ್ಲಿ ವಿಮಾನಖಾನೆಯಲ್ಲಿ ತನ್ನ ಪ್ರಿಯಕರ ವಿಮಾನವನ್ನು ಆಕೆ ಭೇಟಿ ಮಾಡಿದ್ದು, ಅದರ ಜತೆ ಪ್ರೀತಿಯಿಂದ ಮುದ್ದಾಡಿದ್ದಳು. ಅದರ ರೆಕ್ಕೆಗಳ ಮೇಲೆ ಹತ್ತಿ ಅಪ್ಪಿಕೊಂಡು ಮುತ್ತಿಟ್ಟು ಬಂದಿದ್ದಳು. ಆ ಕ್ಷಣವನ್ನು ತನ್ನ ಜೀವನದ ಅತ್ಯಂತ ಮಧುರ ಕ್ಷಣಗಳು ಎಂದು ಕರೆಯುವ ಮಿಚೆಲ್​, "ನಾವಿಬ್ಬರೂ ಅಂದು ತುಂಬಾ ಸಂತೋಷದಿಂದ ಕ್ಷಣಗಳನ್ನು ಕಳೆದೆವು. ನಾನು ಅವನಿಗೆ ಮತ್ತಿಟ್ಟು ಮೆಚ್ಚಿಸಿದೆ." ಎಂದು ಹೇಳಿದ್ದಾರೆ. ಪ್ರೀತಿಯ ವಿಮಾನಕ್ಕೆ ಸ್ಕಾಟ್ಜ್ (ಡಾರ್ಲಿಂಗ್​) ಎಂದು ಅಡ್ಡ ಹೆಸರಿಟ್ಟಿರುವುದಾಗಿ ಆಕೆ ಸಂತಸದಿಂದ ಹೇಳಿಕೊಂಡಿದ್ದಾಳೆ.

ಮಿಚೆಲ್​ನ ಪ್ರೀತಿಯನ್ನು ಒಪ್ಪಿಕೊಂಡಿರುವ ಆಕೆಯ ಕುಟುಂಬ ಮದುವೆಗೆ ಒಪ್ಪಿಗೆ ಕೊಟ್ಟಿದೆಯಂತೆ. ಆದರೆ ಅಳಿಯನನ್ನು ನೋಡಲು ಯಾವುದೇ ಉತ್ಸಾಹವನ್ನು ಆಕೆಯ ತಂದೆ ತಾಯಿ ತೋರಿಸಿಲ್ಲ.

ಈ ರೀತಿಯಲ್ಲಿ ಮನುಷ್ಯರಿಗೆ ವಸ್ತುಗಳ ಮೇಲೆ ಪ್ರೀತಿಯಾಗುವುದನ್ನು ವೈದ್ಯಕೀಯ ಭಾಷೆಯಲ್ಲಿ ಆಬ್ಜೆಕ್ಟೊಫಿಲಿಯಾ ಎಂದು ಕರೆಯುತ್ತಾರೆ. ಈಗಾಗಲೇ ಅನೇಕರು ಈ ರೀತಿಯ ಪ್ರೀತಿಯಲ್ಲಿ ಸಿಲುಕಿದ್ದಾರೆ. ತನ್ನ ವಸ್ತು ಪ್ರೀತಿಯ ಬಗ್ಗೆ ಮಾತನಾಡುವ ಮಿಚೆಲ್​​, ಜಗತ್ತು ಇದನ್ನು ಪೂರ್ತಿ ಪ್ರಮಾಣದಲ್ಲಿ ಒಪ್ಪಿಕೊಳ್ಳುವುದಾಗಿದ್ದರೆ ಚೆನ್ನಾಗಿರುತ್ತಿತ್ತು. ಸಾಕಷ್ಟು ಜನ ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ನನ್ನ ಪ್ರೀತಿಯೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net