

ನೆರೆರಾಷ್ಟ್ರಗಳ ಬಗ್ಗೆ ಭಾರತದ ವಿದೇಶಾಂಗ ನೀತಿ ಮೊದಲಿನಿಂದಲೂ ಸ್ಪಷ್ಟವಾಗಿದೆ. ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಬಯಸುವ ಭಾರತ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಮಾತ್ರವಲ್ಲ ನೆರೆರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದಾಗ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಹಾಯಕ್ಕೆ ಧಾವಿಸಿದೆ. ದ್ವೀಪರಾಷ್ಟ್ರವಾದ ಶ್ರೀಲಂಕಾ ಕಳೆದ ಕೆಲ ವರ್ಷಗಳಲ್ಲಿ ತೀವ್ರ ಸಂಕಷ್ಟದ ದಿನಗಳನ್ನು ಕಂಡಿದೆ. ಬೆಲೆಯೇರಿಕೆ, ಆರ್ಥಿಕತೆ ಕುಸಿತ, ನಿರುದ್ಯೋಗ, ಹಸಿವು, ರಾಜಕೀಯ ಅರಾಜಕತೆ, ನಾಗರಿಕ ದಂಗೆ ಹೀಗೆ ಸಣ್ಣ ರಾಷ್ಟ್ರ ತಾನೇ ಸೃಷ್ಟಿಸಿಕೊಂಡ ಸಮಸ್ಯೆಗಳ ಬಲೆಯಿಂದ ಹೊರಬರಲು ಇನ್ನು ಕೆಲ ವರ್ಷಗಳಾದರೂ ಬೇಕು. ಈಗ ಅಲ್ಲಿ ರಾಜಕೀಯ ನೇತೃತ್ವ ಬದಲಾಗಿದ್ದು, ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಸೋಮವಾರ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಮತ್ತು ಉಭಯ ದೇಶಗಳು ಹಲವು ಮಹತ್ವದ ತಿಳಿವಳಿಕೆ ಪತ್ರಗಳಿಗೆ (ಎಂಒಯು) ಸಹಿಹಾಕಿವೆ.
‘ಭಾರತವಿರೋಧಿ ಚಟುವಟಿಕೆಗೆ ಶ್ರೀಲಂಕಾದಲ್ಲಿ ಅವಕಾಶ ಇಲ್ಲ’ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ದಿಸ್ಸನಾಯಕೆ ಚೀನಾಕ್ಕೂ ಪರೋಕ್ಷ ಸಂದೇಶ ರವಾನಿಸಿದ್ದಾರೆ. ವಾಸ್ತವದಲ್ಲಿ, ಶ್ರೀಲಂಕಾದ ಸಮಸ್ಯೆ ತೀವ್ರಗೊಂಡಿದ್ದೇ ಅದು ಚೀನಾದ ಸಾಲ ಸಂಕೋಲೆಯಲ್ಲಿ ಸಿಲುಕಿದ ಬಳಿಕ. ಚೀನಾದ ಈ ಕುತಂತ್ರ ಹೊಸದೇನಲ್ಲ. ಭಾರತದ ನೆರೆರಾಷ್ಟ್ರಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಅದು ಸದಾ ಯತ್ನಿಸುತ್ತಲೇ ಇದೆ ಮತ್ತು ಇದಕ್ಕಾಗಿ ಸಣ್ಣ ರಾಷ್ಟ್ರಗಳಿಗೆ ಅಭಿವೃದ್ಧಿ ಯೋಜನೆಗಳ ಹೆಸರಲ್ಲಿ ದೊಡ್ಡ ಮೊತ್ತದ ಸಾಲವನ್ನು ನೀಡಿ, ಮುಂದೆ ತನ್ನ ಅಣತಿಯಂತೆ ಸಾಗಬೇಕು ಎಂಬಂತೆ ಮಾಡುತ್ತಿದೆ. ನೇಪಾಳ ಕೂಡ ಇದಕ್ಕೆ ಜ್ವಲಂತ ಸಾಕ್ಷಿ. ಆದರೆ, ಅಲ್ಲಿನ ರಾಜಕೀಯ ನೇತೃತ್ವ ಭಾರತದ ಬಗ್ಗೆ ಕೃತಘ್ನ ನೀತಿ ಅನುಸರಿಸಿದ್ದು, ಚೀನಾದ ಓಲೈಕೆಯಲ್ಲಿ ತೊಡಗಿದೆ. ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಎರಡು ವಾರಗಳ ಹಿಂದಷ್ಟೇ ಡ್ರ್ಯಾಗನ್ ರಾಷ್ಟ್ರಕ್ಕೆ ಭೇಟಿ ನೀಡಿ, ಹಲವು ದ್ವಿಪಕ್ಷೀಯ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ.
ಶ್ರೀಲಂಕಾ ಕೂಡ ಚೀನಾದ ಪ್ರಭಾವದಲ್ಲಿದೆ. ಲಂಕಾದ ಹಂಬನ್ತೋಟಾ ಬಂದರು ನಿರ್ವಹಣೆಯ ಹೊಣೆಯನ್ನು ಈಗಾಗಲೇ ಚೀನಾಗೆ ನೀಡಿರುವ ಹಿನ್ನೆಲೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ, ಅದರ ನಡೆ ಕುತೂಹಲ ಮೂಡಿಸಿತ್ತು. ಅನುರಾ ಕುಮಾರ ದಿಸ್ಸನಾಯಕೆ ಅಧ್ಯಕ್ಷರಾದ ಬಳಿಕ ಮೊದಲ ವಿದೇಶ ಭೇಟಿಯನ್ನು ಭಾರತಕ್ಕೆ ಕೈಗೊಳ್ಳುವ ಮೂಲಕ, ಹಳೆಯ ಸ್ನೇಹಿತನೊಂದಿಗೆ ಬಾಂಧವ್ಯವೃದ್ಧಿ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ.
ದಿಸ್ಸನಾಯಕೆ ಭೇಟಿಯಿಂದ ಎರಡೂ ದೇಶಗಳ ಸಂಬಂಧ ಗಟ್ಟಿಗೊಳ್ಳಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ರಾಮೇಶ್ವರಂ ಮತ್ತು ಲಂಕಾದ ತಲೈಮನ್ನಾರ್ ನಡುವೆ ನೌಕಾ ಸಂಚಾರವನ್ನು ಆರಂಭಿಸಲಾಗುವುದು’ ಎಂದು ಪ್ರಕಟಿಸಿದ್ದಾರೆ. ಪೌರಾಣಿಕ, ಚಾರಿತ್ರಿಕವಾಗಿ ಸಂಬಂಧ ಹೊಂದಿರುವ ಲಂಕಾ ಬಗ್ಗೆ ಭಾರತ ಸಹಾನುಭೂತಿ ಹೊಂದಿದೆ. ಹಾಗಾಗಿ, ಅಲ್ಲಿನ ನೆಲ ಯಾವುದೇ ಕಾರಣಕ್ಕೂ ಭಾರತವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಬಾರದು ಮತ್ತು ಭಾರತ ನೀಡಿರುವ ನೆರವು ಹಾಗೂ ಸಹಕಾರವನ್ನು ಮರೆಯದೆ ಉತ್ತಮ ನೆರೆರಾಷ್ಟ್ರವಾಗಿ ರಾಜತಾಂತ್ರಿಕ ಸಂಬಂಧ ಬಲಗೊಳ್ಳಬೇಕು.