

ವಿಜಯಪುರ: ನಗರದ ಜ್ಞಾನಯೋಗಾಶ್ರಮ ಹತ್ತಿರವಿರುವ ಅಕ್ಕಿ ಕಾಲನಿಯಲ್ಲಿ ಮೂಕ ವಧು-ವರರ ವಿವಾಹ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿದೆ.
ವಿಜಯಪುರ ನಗರದ ಅಕ್ಕಿ ಕಾಲನಿಯ ನಿವಾಸಿ ಸುಜಾತಾ ಹಾಗೂ ಶಿವಾನಂದ ರೇಷ್ಮೆ ದಂಪತಿ ಪುತ್ರಿ ಸ್ವಪ್ನ್ನಾ(ವೀಣಾ) ಮತ್ತು ಹುಬ್ಬಳ್ಳಿಯ ಪ್ರಭಾವತಿ ಹಾಗೂ ಚಂದ್ರಶೇಖರ ಶಿವಪ್ಪಯ್ಯನಮಠರ ಪುತ್ರ ವಿನಾಯಕ ಇಬ್ಬರೂ ಮೂಕರಾಗಿದ್ದು, ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ದಾಪಂತ್ಯ ಜೀವನಕ್ಕೆ ಸೋಮವಾರ ಕಾಲಿಟ್ಟರು. ಸ್ವಪ್ನಾ ಮತ್ತು ವಿನಾಯಕ ಅವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂಬುದು ಮತ್ತೊಂದು ವಿಶೇಷ.
ಮೈಸೂರಿನಲ್ಲಿ ಅರಳಿದ ಪ್ರೀತಿ: ಮೈಸೂರಿನ ಶ್ರವಣದೋಷವುಳ್ಳ ಮಕ್ಕಳ ತರಬೇತಿ ಕೇಂದ್ರದಲ್ಲಿ ವಿಶೇಷ ಶಿಕ್ಷಣ ಪಡೆಯುವಾಗ ಸ್ವಪ್ನಾ ಮತ್ತು ವಿನಾಯಕ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮನಸ್ಸುಗಳು ಒಂದಾದ ನಂತರ ಅವರವರ ಪಾಲಕರಿಗೆ ವಿಷಯ ಹೇಳಿದ್ದರು. ಇದಕ್ಕೆ ಒಪ್ಪಿದ ಕುಟುಂಬಸ್ಥರು ಮಕ್ಕಳಿಗೆ ಕಂಕಣಭಾಗ್ಯ ಕಲ್ಪಿಸಿದ್ದಾರೆ.
ಮದ್ವೆ ಕಾರ್ಯಕ್ರಮಕ್ಕೆ ಮನಗೂಳಿ ಶ್ರೀ ಸಂಗನಬಸವ ಶಿವಾಚಾರ್ಯರು, ಮಾಜಿ ಸಚಿವ ಅಪ್ಪಾಸಾಹೇಬ ಮ.ಪಟ್ಟಣಶೆಟ್ಟಿ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಪಾಲಿಕೆ ಮಾಜಿ ಉಪಮೇಯರ್ ಗೋಪಾಲ ಟಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಹತ್ತಳ್ಳಿ, ರವಿ ಬಿಜ್ಜರಗಿ, ಅಶೋಕ ತಿಮಶೆಟ್ಟಿ, ಸಿದ್ದು ಮಲ್ಲಿಕಾರ್ಜುನಮಠ, ವಿಜಯ ಹಿರೇಮಠ ಹಾಗೂ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿ ಶುಭ ಹಾರೈಸಿದರು.