

ವಾಷಿಂಗ್ಟನ್: ಅಮೆರಿಕದ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಭಾರತೀಯ ಪತ್ರಕರ್ತನೊಬ್ಬ ಪ್ರಶ್ನೆ ಕೇಳುತ್ತಿದ್ದಾಗ ಆತನ ಬಗ್ಗೆ ನ್ಯೂಯಾರ್ಕ್ನ ಪತ್ರಕರ್ತೆಯೊಬ್ಬಳು ಅವಮಾನೀಯವಾಗಿ ನಡೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಫೆ.26ರಂದು ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದಲ್ಲಿನ ಕೊರೊನಾ ವೈರಸ್ ಸ್ಥಿತಿಗತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಆ ಸಮಯದಲ್ಲಿ ಶ್ವೇತಭವನದ ಭಾರತೀಯ ಪತ್ರಕರ್ತರೊಬ್ಬರು ಇಂಡೋ-ಯುಎಸ್ ಸಂಬಂಧದ ಬಗ್ಗೆ ಟ್ರಂಪ್ಗೆ ಪ್ರಶ್ನೆಯನ್ನು ಕೇಳುತ್ತಿದ್ದರು. ಅದನ್ನು ಕಂಡ ನ್ಯೂಯಾರ್ಕ್ ಮೂಲದ ಪತ್ರಕರ್ತೆ ತನ್ನ ಪಕ್ಕಕ್ಕೆ ಕುಳಿತ ಪತ್ರಕರ್ತನೊಡನೆ ಯಾರು ಈತ ಎಂದು ಕೇಳಿಕೊಂಡು ಅವಮಾನೀಯವಾಗಿ ನಕ್ಕಿದ್ದಾಳೆ.
ನಿನ್ನೆ(ಫೆ.27) ಟ್ವಿಟ್ಟರ್ನಲ್ಲಿ ಈ ವಿಡಿಯೋ ಹರಿದಾಡಲಾರಂಭಿಸಿದ್ದು ಸಕತ್ ವೈರಲ್ ಆಗಿದೆ. ಅವಮಾನಿಸಿದ ಪತ್ರಕರ್ತೆಯನ್ನು ನ್ಯೂಯಾರ್ಕ್ನ ಎಬೊನಿ ಬೌಡೆನ್ ಎಂದು ಗುರುತಿಸಲಾಗಿದೆ. ಜನಾಂಗೀಯ ನಿಂದನೆ ಮಾಡುತ್ತಿದ್ದಾಳೆ ಎಂದು ಆಕೆಯ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಾರೆ. (ಏಜೆನ್ಸೀಸ್)