ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

SoftGrid
Published on

ನವದೆಹಲಿ: 'ನೀವು ಇಂದು ಕೆಲಸಕ್ಕೆ ತಡವಾಗಿ ಬಂದಿದ್ದೀರಿ, ನಾಳೆಯಿಂದ ಸರಿಯಾದ ಸಮಯಕ್ಕೇ ಬರಬೇಕು' ಎಂದು ಯಾವುದಾದರೂ ಕಂಪನಿಯಲ್ಲಿ ಎಚ್ಚರಿಕೆ ನೀಡಿದರೆ ಅದು ಹೊಸದೇನಲ್ಲ. ಆದರೆ ಇಲ್ಲೊಂದು ಕಂಪನಿ ತುಂಬಾ ವಿಚಿತ್ರ ಎನ್ನುವಂತಿದೆ.

ಏಕೆಂದರೆ ಈ ಕಂಪನಿ ತಡವಾಗಿ ಮನೆಗೆ ಹೋಗದಂತೆ ಎಚ್ಚರಿಕೆ ನೀಡುತ್ತಿದೆ. ಅರ್ಥಾತ್, ಕೆಲಸದ ಅವಧಿ ಮುಗಿಯಲು ಇನ್ನೇನು ಹತ್ತು ನಿಮಿಷ ಇದೆ ಎನ್ನುವಾಗಲೇ ಉದ್ಯೋಗಿಗಳಿಗೆ ಎಚ್ಚರಿಕೆ ನೀಡುವ ಈ ಕಂಪನಿ, ಕೆಲಸದ ಅವಧಿಗಿಂತ ಹೆಚ್ಚಿನ ಸಮಯ ಕಚೇರಿಯಲ್ಲಿ ಇರದಂತೆ ನೋಡಿಕೊಳ್ಳುತ್ತಿದೆ.

ಮಾತ್ರವಲ್ಲ, ಈ ಕಂಪನಿ ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಗೆ ಹೊರತಾದ ಸಮಯದಲ್ಲಿ ಇ-ಮೇಲ್​ ಕಳಿಸುವುದಿಲ್ಲ ಹಾಗೂ ಕರೆ ಕೂಡ ಮಾಡುವುದಿಲ್ಲ. ಇದನ್ನೆಲ್ಲ ನಂಬುವುದು ಕಷ್ಟವೆನಿಸಿದರೂ ನಿಜವೇ. ತಮ್ಮ ಕಚೇರಿಯಲ್ಲಿ ಇಂಥ ವಾತಾವರಣ ಇದೆ ಎಂದು ಅಲ್ಲಿನ ಉದ್ಯೋಗಿಯೊಬ್ಬರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಮಧ್ಯಪ್ರದೇಶದ ಸಾಫ್ಟ್​​ಗ್ರಿಡ್ ಕಂಪ್ಯೂಟರ್ಸ್​ ಎಂಬ ಕಂಪನಿಯಲ್ಲಿ ಈ ವಿಶೇಷವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಹ್ಯೂಮನ್ ರಿಸೋರ್ಸ್​ ಸ್ಪೆಷಲಿಸ್ಟ್​ ತನ್ವಿ ಖಂಡೇಲ್​ವಾಲ್ ಎಂಬಾಕೆ ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗಿಗಳ ಕೆಲಸ ಹಾಗೂ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net