

ಶಿವಮೊಗ್ಗ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ರಾಷ್ಟ್ರದ ಸಮಗ್ರತೆ, ಐಕ್ಯತೆ ಮತ್ತು ಭದ್ರತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ್‌ಮೂರ್ತಿ ಬಣ್ಣಿಸಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿವಸ ಆಚರಣೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಪಟೇಲರು ಭಾರತವನ್ನು ಗಣರಾಜ್ಯವಾಗಿಸಿದವರು. ರಾಜಪ್ರಭುತ್ವದಿಂದ ಬಿಡುಗಡೆ ಮಾಡಿ, ಪ್ರಜಾಪ್ರಭುತ್ವವನ್ನು ಜಾರಿಗೊಳಿಸಲು ಶ್ರಮಿಸಿದವರು. ಸ್ವಾತಂತ್ರ್ಯ ಹೋರಾಟಗಾರರೂ ಭಾರತದ ಪ್ರಪ್ರಥಮ ಉಪಪ್ರಧಾನಿ, ಗೃಹ ಸಚಿವರೂ ಆಗಿದ್ದರು. ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಮಾತನಾಡಿ, ಸರ್ದಾರ್ ವಲ್ಲಭಭಾಯ್ ಪಟೇಲ್ ದೇಶ ಕಂಡ ಅಪರೂಪದ ದಕ್ಷ ಆಡಳಿತಗಾರರು. ದೇಶದ ಹಿತಕ್ಕಾಗಿ ಹಗಲಿರುಳು ದುಡಿದವರು. ಅವರಂತೆ ರಾಷ್ಟ್ರೀಯ ಐಕ್ಯತೆ ಮತ್ತು ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಡಾ. ಯಾದವ್ ಬೊಡ್ಕೆ, ಜಯಕುಮಾರ್, ವಿಜಯ್, ನಾಗೇಶ್, ರಮೇಶ್ ಇತರರು ಉಪಸ್ಥಿತರಿದ್ದರು.