

ಬೆಂಗಳೂರು: ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಸೋಮವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾದರು. ಆ ಮೂಲಕ ದೇಶದ ರಾಜಕಾರಣದ ಪ್ರಭಾವಿ ಕೊಂಡಿಯೊಂದು ಕಳಚಿದ್ದು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಶ್ನಾತೀತ ನಾಯಕನ ಇನ್ನು ನೆನಪು ಮಾತ್ರ. ಮುಲಾಯಂ ಇನ್ನಿಲ್ಲ ಎಂಬ ಸುದ್ದಿ ಕೇಳಿ ದೇಶದ ಗಣ್ಯರು, ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮುಲಾಯಂ ಸಿಂಗ್ರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಎಚ್.ಡಿ.ದೇವೇಗೌಡ, 'ನನ್ನ ಬಹುಕಾಲದ ಸ್ನೇಹಿತ ಮತ್ತು ಸಹೋದ್ಯೋಗಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ. 'ಜಾತ್ಯತೀತ ಮತ್ತು ಸಮಾಜವಾದಿ ರಾಜಕೀಯ ಸಂಪ್ರದಾಯಗಳಿಗೆ ಬದ್ಧರಾಗಿದ್ದ ಮುಲಾಯಂ ಅವರು ಇನ್ನಿಲ್ಲ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ದೇವೇಗೌಡ ಹೇಳಿದ್ದಾರೆ.
'ಸಮಾಜವಾದಿ ಪಕ್ಷದ ವರಿಷ್ಠರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಮುಲಾಯಂ ಸಿಂಗ್ ಯಾದವ್ ಅವರ ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಾರ್ಥಿಸಿದ್ದಾರೆ.
'ಹಿರಿಯ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನ ದೇವರು ನೀಡಲಿ' ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.
ಮೂರು ಬಾರಿ ಮುಖ್ಯಮಂತ್ರಿಯಾಗಿ, ಕೇಂದ್ರ ರಕ್ಷಣಾ ಸಚಿವರಾಗಿ, ರಾಜ್ಯ ಖಾತೆ ಸಚಿವರಾಗಿ, 8 ಬಾರಿ ಶಾಸಕರಾಗಿ, ಎಂಎಲ್ಸಿಯಾಗಿ ಮುಲಾಯಂ ಸಿಂಗ್ ಆಯ್ಕೆಯಾಗಿದ್ದರು. ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು.