ಸರ್ಕಾರದ ವೈಫಲ್ಯಗಳ ವಿರುದ್ಧ ಮೈತ್ರಿ ಪಕ್ಷಗಳಿಂದ ಒಗ್ಗಟ್ಟಿನ ಹೋರಾಟ; ಪ್ರತಿಪಕ್ಷ ನಾಯಕ ಆರ್.ಅಶೋಕ್

R Ashok
Published on

ಬೆಂಗಳೂರು: ವರ್ಗಾವಣೆ ದಂಧೆ, ಕಾವೇರಿ ನೀರು ಹಂಚಿಕೆಯಲ್ಲಿ ಮೋಸ ಮತ್ತಿತರ ಸರ್ಕಾರದ ತಪ್ಪುಗಳ ವಿರುದ್ಧ ಹೋರಾಡಲು ಮೈತ್ರಿ ಪಕ್ಷಗಳು ಜತೆಯಾಗಿ ನಿಳುವಳಿ ಸೂಚನೆ ಮಂಡಿಸಲಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಬೆಳಗಾವಿ ಅಧಿವೇಶನ ನಮ್ಮ ಪಾಲಿಗೆ ಬಹಳ ಮಹತ್ವವಾದ ಅಧಿವೇಶನ. ಸರ್ಕಾರ ಒಟ್ಟು 60 ತಪ್ಪುಗಳನ್ನು ಮಾಡಿದೆ. ಬರದ ವಿಚಾರವಾಗಿಯೂ ಸರ್ಕಾರದ ಕಿವಿ ಹಿಂಡುತ್ತೇವೆ. ಹದಗೆಟ್ಟಿರುವ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪರಿಷತ್ ಪ್ರತಿಪಕ್ಷ ನಾಯಕ, ವಿಧಾನಸಭೆ ಉಪನಾಯಕ, ಉಭಯ ಸದನಗಳ ವಿಪ್‌ಗಳ ನೇಮಕ ಕುರಿತು ಕೇಂದ್ರದ ನಾಯಕರ ಜತೆ ನಾನು, ವಿಜಯೇಂದ್ರ ಮಾತಾಡಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ತೆಗೆದುಕೊಂಡಿದೆ. ಅಧಿವೇಶನ ಆರಂಭಕ್ಕೂ ಮುಂಚೆ ಆಯ್ಕೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಉಪ ಮುಖ್ಯಮಂತ್ರಿ ಡಿಕೆಶಿ ತೆಲಂಗಾಣ ಭೇಟಿ ಕುರಿತ ಪ್ರಶ್ನೆಗೆ, ನಾವು ಇಲ್ಲಿನ ಜನರ ಕಷ್ಟಗಳ ಬಗ್ಗೆ ಚರ್ಚೆ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ. ಡಿಕೆಶಿ ಅವರು ಜನರ ಹಿತ, ಕಷ್ಟ ಕಡೆಗಣಿಸಿ ತೆಲಂಗಾಣಕ್ಕೆ ಹೋಗಿದ್ದಾರೆ. ತೆಲಂಗಾಣ ಶಾಸಕರ ಹಿತವೇ ಡಿಕೆಶಿಗೆ ಹೆಚ್ಚಾಗಿದೆ. ರಾಜ್ಯದ ಜನರ ಕಷ್ಟಕ್ಕಿಂತಲೂ ತೆಲಂಗಾಣ ಶಾಸಕರ ಯೋಗಕ್ಷೇಮವೇ ಡಿಕೆಶಿಗೆ ಮುಖ್ಯ. ತೆಲಂಗಾಣ ಶಾಸಕರಿಗೆ ಯಾವ ಹೊಟೇಲ್ನಲ್ಲಿ ಇರಿಸಬೇಕು? ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಕೊಡಿಸಬೇಕಾ? ಯೋಗ ಕ್ಷೇಮ ಹೇಗೆ ಮಾಡಬೇಕು ಎನ್ನುವುದೇ ಡಿಕೆಶಿಗೆ ಮುಖ್ಯ ಎಂದು ವಾಗ್ದಾಳಿ ನಡೆಸಿದರು.

ತಾಲೀಮು ಆರಂಭಿಸಿರುವ ಅಶೋಕ್..

ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಹೊಸ ಜವಾಬ್ದಾರಿ ಹೊತ್ತಿರುವ ಆರ್.ಅಶೋಕ್, ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬೇಕಾದ ತಯಾರಿ ನಡೆಸಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ ೆನ್ ಮೂಲಕ ಪಕ್ಷದ ಮುಖಂಡರಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net