ತಾಯಿ-ಶಿಶು ಮರಣ ತಡೆಗೆ ವಿಶಿಷ್ಟ ಸೂತ್ರ

klr health
ಕೋಲಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ.
Published on

* ಕಿರುವಾರ ಎಸ್​. ಸುದರ್ಶನ್​ ಕೋಲಾರ

ತಾಯಿ ಹಾಗೂ ಮಗುವಿನ ಮರಣ ಪ್ರಮಾಣ ಸಂಪೂರ್ಣ ತಡೆಗಟ್ಟಲು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರ್​ಆರ್​ಆರ್​, ಎಂಎಂಎಂ ಸೂತ್ರ ಜಾರಿಗೊಳಿಸಿದೆ.

ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ರಕ್ತಹಿನತೆ ಸೇರಿ ಹಲವು ಗಂಭೀರ ಸಮಸ್ಯೆ ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ತಾಯಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇದನ್ನು ನಿಯಂತ್ರಿಸಲು ಆರ್​ಆರ್​ಆರ್​ ಅಡಿಯಲ್ಲಿ ಎಂಎಂಎಂ ಮಾದರಿ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ.

ರಾಷ್ಟ್ರಮಟ್ಟದಲ್ಲಿ ಒಂದು ಲಕ್ಷ ಶಿಶು ಜನನಕ್ಕೆ ಶೇ.63 ಹಾಗೂ ರಾಜ್ಯದಲ್ಲಿ ಶೇ.48 ತಾಯಿ, ಶಿಶು ಮರಣ ಹೊಂದುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಾಯಿ&ಮಗು ಮರಣ ಪ್ರಮಾಣ ಕಡಿಮೆಗೊಳಿಸಲು ಇಲಾಖೆ ಯೋಜನೆ ರೂಪಿಸಿದೆ.

ವಿಶಿಷ್ಟ ಕ್ರಮ: ಜಿಲ್ಲೆಯಲ್ಲಿರುವ ಪ್ರತಿ ಗರ್ಭಿಣಿಯರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರ ಮೂಲಕ ಪಡೆಯಲಾಗುತ್ತದೆ. ಅದರಂತೆ ಅವರು ಚಿಕಿತ್ಸೆ ಪಡೆಯುತ್ತಿರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳ ಮಾಹಿತಿ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಜತೆಗೆ ಗರ್ಭಿಣಿ ಹೆರಿಗೆಗೆ ಸ್ವಂತ ವಾಹನ ಅಥವಾ ಆಂಬುಲೆನ್ಸ್​ನಲ್ಲಿ ಹೋಗುವ ಮಾಹಿತಿ ಪಡೆಯಲಾಗುತ್ತದೆ. ಅಲ್ಲದೆ ಹಿಂದೆ ಯಾವ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನೂ ಪಡೆದುಕೊಳ್ಳಲಾಗುವುದು. ಅಪಾಯದ ಸ್ಥಿತಿಯಲ್ಲಿರುವ ಗರ್ಭಿಣಿಯರ ಮೇಲೆ ನಿರಂತರವಾಗಿ ನಿಗಾ ವಹಿಸಲಾಗುತ್ತದೆ. ಅಪಾಯದ ಸೂಚನೆಗಳಿರುವ ಮಾಹಿತಿಯನ್ನು ಆಸ್ಪತ್ರೆಗಳಿಗೂ ನೀಡುವ ಮೂಲಕ ಸುರಕ್ಷಿತ ಹೆರಿಗೆಗೆ ಆದ್ಯತೆ ನೀಡಿ ತಾಯಿ&ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗಿದೆ.

* ಆರೋಗ್ಯ ಸಮಸ್ಯೆ ಅರಿತು ಚಿಕಿತ್ಸೆ

ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಮುಂದಾಗಿರುವ ಇಲಾಖೆ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮಸ್ಯೆ ಗಂಭೀರವಾಗುವ ಮುನ್ನವೇ ಹೆರಿಗೆಗೆ ಇರುವ ಸಮಸ್ಯೆ ಅರಿತು ಚಿಕಿತ್ಸೆ ನೀಡುವುದು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ಉನ್ನತ ಚಿಕಿತ್ಸಾ ಆಸ್ಪತ್ರೆಗೆ ಶಿಾರಸು ಮಾಡಲು ಕ್ರಮವಹಿಸಲಾಗಿದೆ. ಈ ಉದ್ದೇಶಕ್ಕಾಗಿಯೇ ಹೆರಿಗೆ ವಾರ್ಡ್​ಗಳಿಗೆ ಪ್ರತ್ಯೇಕ ಮೊಬೈಲ್​ ನಂಬರ್​ ನೀಡಲಾಗಿದ್ದು, ಚಿಕಿತ್ಸೆ ನೀಡುವ ಸಮಯದಲ್ಲಿ ಅನುಮಾನಗಳು ಬಂದಲ್ಲಿ ವಿಡಿಯೋ ಕಾಲ್​ ಅಥವಾ ಹಿರಿಯ ವೈದ್ಯರ ಸಲಹೆ, ಚಿಕಿತ್ಸೆಗೆ ಮಾರ್ಗದರ್ಶನ ಪಡೆಯಲು ಸಹಕಾರಿಯಾಗಲಿದೆ. ಆರಂಭದಿಂದ ಚಿಕಿತ್ಸೆ ಪೂರ್ಣಗೊಳ್ಳುವ ತನಕ ಪರಿಶೀಲನೆ ನಡೆಸಲು ಸಮಿತಿಗಳನ್ನು ರಚಿಸಲಾಗಿದೆ. 2024-25ರ ಸಾಲಿನಲ್ಲಿ ಜಿಲ್ಲೆಯಲ್ಲಿ 9 ತಾಯಂದಿರು ಮರಣ ಹೊಂದಬಹುದಾದದ ಪ್ರಕರಣ ಪತ್ತೆಯಾಗಿದ್ದವು. ಆದರೆ, ಆರ್​ಆರ್​ಆರ್​, ಎಂಎಂಎಂ ಸೂತ್ರದಡಿ ಚಿಕಿತ್ಸೆ ಕಲ್ಪಿಸಿದ ಕಾರಣ ಪ್ರಾಣ ರಕ್ಷಣೆ ಮಾಡಲಾಗಿದೆ.

* ಕಾರ್ಯಪಡೆ ರಚನೆ

ತಾಯಂದಿರ ಮರಣವನ್ನು ತಗ್ಗಿಸಲು ಜಿಲ್ಲೆ, ತಾಲೂಕು, ಸಿಎಚ್​ಸಿ, ಪಿಎಚ್​ಸಿ ಹಂತದಲ್ಲಿ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಜನವರಿಯಿಂದ ಇತ್ತೀಚೆಗೆ ಜಿಲ್ಲೆಯ ಮಾಲೂರು 3, ಮುಳಬಾಗಿಲು 1 ಗಂಭೀರ ಸಮಸ್ಯೆ ಇದ್ದಂತಹ ಗರ್ಭಿಣಿಯರ ಮಾಹಿತಿ ಇಲಾಖೆಗೆ ಬಂದಿತು, ಕೂಡಲೇ ಕಾರ್ಯಪಡೆಯು ಕಾರ್ಯಪ್ರವೃತ್ತರಾಗಿ ಹಂತಹಂತವಾಗಿ ಚಿಕಿತ್ಸೆ ಕೊಡಿಸುವ ಮೂಲಕ ಸಮಸ್ಯೆಯಿಂದ ಪಾರು ಮಾಡಿದೆ.

* ಎಸ್​ಎನ್​ಆರ್​, ಜಾಲಪ್ಪ ಆಸ್ಪತ್ರೆ ಸಹಕಾರ

ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆ ಜತೆಗೆ ಆರ್​.ಎಲ್​.ಜಾಲಪ್ಪ ಆಸ್ಪತ್ರೆ ಸಹಕಾರ ಸಹಕಾರ ದೊರಕಿದ್ದು, ಒಬಿಜಿ ವಿಭಾಗದ ವೈದ್ಯರು, ದೇವರಾಜ ಅರಸು ಮೆಡಿಕಲ್​ ಕಾಲೇಜು ಪ್ರಾಂಶುಪಾಲ ಡಾ.ಪ್ರಭಾಕರ್​ ಸೇವೆಗೆ ಒಪ್ಪಿ ಈಗಾಗಲೇ ಸರ್ಕಾರಿ ಆಸ್ಪತ್ರೆಯಿಂದ ಶಿಾರಸು ಮಾಡಿದ ಗರ್ಭಿಣಿಯರಿಗೆ ಚಿಕಿತ್ಸೆ ಕಲ್ಪಿಸಿದ್ದಾರೆ. ಗರ್ಭಿಣಿಯು ಚಿಕಿತ್ಸೆಗೆ ದಾಖಲಾದರೆ ಸಮಸ್ಯೆಯೇನು, ತಕ್ಷಣ ರಕ್ತದ ಅವಶ್ಯಕತೆ ಇದೆಯೇ ಎಂಬುದರ ಮಾಹಿತಿ ಪಡೆದುಕೊಂಡು ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಇದಕ್ಕೆ ತಕ್ಕಂತೆ ವೈದ್ಯರು, ಸಿಬ್ಬಂದಿ ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಡಿಸಿಒ ಡಾ.ಶ್ರೀನಿವಾಸ್​ ತಿಳಿಸಿದರು.

ಕೋಟ್​...

ತಾಯಿ ಮತ್ತು ಮಗುವಿನ ಸಾವಿನ ಪ್ರಕರಣವನ್ನು ಸಾಧ್ಯವಾದಷ್ಟು ಶೂನ್ಯಕ್ಕೆ ತರಬೇಕು ಎಂದು ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಅಗತ್ಯ ಕ್ರಮಕೈಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಕ್ಕಿರುವ ಅವಕಾಶದ ಅವಧಿಯಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುವುದು ಮೂಲ ಉದ್ದೇಶ.

* ಡಾ.ಶ್ರೀನಿವಾಸ್​, ಡಿಎಚ್​ಒ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net