15-15 ದಿನ ಗಂಡನನ್ನು ಹಂಚಿಕೊಂಡ ಪತ್ನಿಯರು! ಗುಟ್ಟು ರಟ್ಟಾಗುತ್ತಿದ್ದಂತೆ ಪೊಲೀಸ್​ ಮಧ್ಯಸ್ತಿಕೆ

wedding
Published on

ಬಿಹಾರ: ಮನೆ, ಜಮೀನು, ಆರಭರಣ, ಪಾತ್ರೆ, ಜಾನುವಾರು... ಇವುಗಳನ್ನು ಕುಟುಂಸ್ಥರು ಭಾಗ ಮಾಡಿಕೊಳ್ಳುವುದು ಸಹಜ. ಇನ್ನೂ ಮುಂದುವರಿದು ಮನೆಯಲ್ಲಿನ ಹಿರಿಯರ ಜವಾಬ್ದಾರಿಯನ್ನ ತಲಾ ಮೂರ್ನಾಲ್ಕು ತಿಂಗಳು ಇಲ್ಲವೇ ಒಂದೊಂದು ವರ್ಷ ಎಂದು ಮಕ್ಕಳು ವಹಿಸಿಕೊಳ್ಳೋದನ್ನೂ ನೋಡಿದ್ದೇವೆ. ಆದರಿಲ್ಲಿ ಇಬ್ಬರು ಪತ್ನಿಯರು ಗಂಡನನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಅದೂ ತಿಂಗಳಲ್ಲಿ 15 ದಿನ ಒಬ್ಬಾಕೆ ಜತೆ, ಇನ್ನುಳಿದ 15 ದಿನ ಮೊತ್ತೊಬ್ಬಾಕೆ ಜತೆ ಗಂಡ ಇರಬೇಕು!

ಇಂತಹ ವಿಚಿತ್ರ ಘಟನೆ ಬಿಹಾರದಲ್ಲಿ ಪೂರ್ಣಿಯಾ ಎಂಬಲ್ಲಿ ನಡೆದಿದೆ. ಆ ವ್ಯಕ್ತಿಗೆ ಈಗಾಗಲೇ ಮದುವೆ ಆಗಿ 6 ಮಕ್ಕಳಿದ್ದಾರೆ. ಆದರೂ ಗುಟ್ಟಾಗಿ ಮತ್ತೊಬ್ಬಾಕೆ ಜತೆ 2ನೇ ಮದುವೆ ಆಗಿದ್ದ. 2ನೇ ಪತ್ನಿಗೂ ಒಂದು ಮಗು ಇದೆ. ಈ ವಿಚಾರ ತಿಳಿಯುತ್ತಿದ್ದಂತೆ 2ನೇ ಪತ್ನಿ ಜಗಳ ಮಾಡಿದ್ದಳು. ಅತ್ತ ಮೊದಲ ಪತ್ನಿಗೂ ಈ ವಿಚಾರ ಆಘಾತ ನೀಡಿತ್ತು. ಇಬ್ಬರು ಪತ್ನಿಯರೂ ಗಂಡನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಗಂಡ ಮತ್ತು ಪತ್ನಿಯರಿಬ್ಬರನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಗಂಡನೂ ತನಗೆ ಇಬ್ಬರು ಪತ್ನಿಯರು ಬೇಕು ಎಂದಿದ್ದಾನೆ. ಅತ್ತ ನನ್ನ ಗಂಡ ನನಗೇ ಬೇಕು, ನನ್ನೊಂದಿಗೇ ಇರಬೇಕು ಎಂದು ಪತ್ನಿಯರಿಬ್ಬರೂ ಪಟ್ಟು ಹಿಡಿದಿದ್ದರು.

ಕೊನೆಗೆ ಪರಸ್ಪರ ಮಾತುಕತೆ ನಡೆಸಿದ ಪೂರ್ಣಿಯಾ ಪೊಲೀಸ್ ಕುಟುಂಬ ಸಲಹಾ ಕೇಂದ್ರವು (ಪರಿವಾರ ಪ್ರಮರ್ಶ್ ಕೇಂದ್ರ) ಮೊದಲ ಪತ್ನಿಯೊಂದಿಗೆ ತಿಂಗಳ ಆರಂಭದ 15 ದಿನ ಹಾಗೂ 2ನೇ ಪತ್ನಿಯೊಂದಿಗೆ ತಿಂಗಳ ಕೊನೆಯ 15 ದಿನ ಇರುವಂತೆ ಗಂಡನಿಗೆ ಸೂಚಿಸಿದೆ. ಈ ಒಪ್ಪಿಗೆ ಪತ್ರಕ್ಕೆ ಮೂವರೂ ಸಹಿ ಹಾಕಿದ್ದಾರೆ. ಕೌಟುಂಬಿಕ ಸಲಹಾ ಕೇಂದ್ರದ ಈ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net