

ಯಾವುದೇ ಕೆಲಸವನ್ನೂ ಪರಿಪೂರ್ಣತೆಯಿಂದ ಮಾಡುವ, ವ್ಯಕ್ತಿಗಳ ದೌರ್ಬಲ್ಯಗಳನ್ನು ನೋಡದೆ ಅವರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ, ಎಲ್ಲರ ಸಲಹೆಯನ್ನು ಆಲಿಸುವ, ಗೌರವಿಸುವ ವಿಶಿಷ್ಟ ವ್ಯಕ್ತಿತ್ವ ಡಾ. ಕೆ. ಕಸ್ತೂರಿರಂಗನ್ ಅವರದ್ದಾಗಿತ್ತು.
ಅವರೊಂದಿನ ಮೊದಲ ಭೇಟಿ 1998-99ರಲ್ಲಿ ಆಯಿತಾದರೂ, ಒಡನಾಟ ಆರಂಭವಾಗಿದ್ದು 2008ರಲ್ಲಿ ಕರ್ನಾಟಕ ಜ್ಞಾನ ಆಯೋಗ ರಚನೆಯಾದಾಗ. ಅವರು ಅಧ್ಯಕ್ಷರಾಗಿದ್ದರು, ನಾನು ಸದಸ್ಯ ಕಾರ್ಯದರ್ಶಿ ಆಗಿದ್ದೆ. 2009ರಲ್ಲಿ ಯುಪಿಎ ಸರ್ಕಾರ ರಚನೆಯಾಗಿ ಡಾ.ಮನಮೋಹನ್ ಸಿಂಗ್ ಎರಡನೇ ಬಾರಿ ಪ್ರಧಾನಿಯಾದಾಗ ಕಸ್ತೂರಿ ಅವರು ಯೋಜನಾ ಆಯೋಗದ ಸದಸ್ಯರಾದರು. ದೆಹಲಿಗೆ ಹೋಗುವುದು ಅನಿವಾರ್ಯವಾಯಿತು. ಆಗ, ‘ನಾನು ದೆಹಲಿಯಲ್ಲಿ ಇರುತ್ತೇನೆ. ನೀವು ಇದನ್ನು ಗಮನಿಸಿ. ಸಂಪರ್ಕದಲ್ಲಿ ಇರೋಣ’ ಎಂದು ಹೇಳಿ, ನನ್ನ ಮೇಲೆ ಹೊಣೆಗಾರಿಕೆ ವಹಿಸಿ, ಸಂಪೂರ್ಣ ವಿಶ್ವಾಸ ಇರಿಸಿದರು.
ಎರಡು ತಿಂಗಳಿಗೊಮ್ಮೆ ಜ್ಞಾನ ಆಯೋಗದ ಸಭೆ ನಡೆಯುತ್ತಿತ್ತು. ಸಭೆಯ ಮುನ್ನ ದೆಹಲಿಗೆ ತರಳಿ ಅವರಿಗೆ ಕಾರ್ಯಪ್ರಗತಿಯ ವರದಿ ನೀಡುತ್ತಿದ್ದೆ. ಅದನ್ನೆಲ್ಲ ಅವಲೋಕಿಸಿ ಅವರು ಬೆಂಗಳೂರಿಗೆ ಬಂದು ಸಭೆಗೆ ಹಾಜರಾಗುತ್ತಿದ್ದರು. ಜ್ಞಾನ ಆಯೋಗದ ಸಭೆಗಳನ್ನು ತುಂಬ ಜೀವಂತಿಕೆಯಿಂದ ನಡೆಸುತ್ತಿದ್ದರು. ಪ್ರತಿಯೊಬ್ಬ ಸದಸ್ಯರ ಮಾತು, ಸಲಹೆಗಳನ್ನು ಗಂಭೀರವಾಗಿ ಆಲಿಸುತ್ತಿದ್ದರು ಮತ್ತು ಒಳ್ಳೆಯ ಅಂಶ ಹಾಗೂ ಸಲಹೆಗಳನ್ನು ನೀಡಿದ ಸದಸ್ಯರನ್ನು ಪ್ರಶಂಸಿಸುತ್ತಿದ್ದರು. ಒಂದು ಸಭೆಯಲ್ಲಿ ಐಎಎಸ್ ಅಧಿಕಾರಿಗಳು ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ, ರಾಜ್ಯದ ವಿವಿಗಳ ಉಪ ಕುಲಪತಿಗಳಿಗೆ ಮಾತನಾಡಲು ಹೆಚ್ಚು ಸಮಯ ಸಿಕ್ಕಿರಲಿಲ್ಲ. ಇದನ್ನು ಗಮನಿಸಿದ್ದ ರಂಗನ್ ಮುಂದಿನ ಸಭೆಯಲ್ಲಿ ಮೊದಲು ಉಪ ಕುಲಪತಿಗಳಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಹೀಗೆ ಸೂಕ್ಷ್ಮ ಸಂಗತಿಗಳನ್ನೂ ಗಮನಿಸುತ್ತಿದ್ದರು.
ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದರು: ‘ಈ ಸರ್ಕಾರದ ವ್ಯವಸ್ಥೆಯಲ್ಲಿ ನಾವು ಆಕಸ್ಮಿಕವಾಗಿ ವಿಧಾನಸೌಧಕ್ಕೆ ಬಂದಿದ್ದೇವೆ. ಇಲ್ಲಿ ಶಾಶ್ವತವಾಗಿ ವ್ಯವಸ್ಥೆ ನಡೆಸುವವರಿಗೆ ಸಹಾಯ ಮಾಡಿ, ಬೆಂಬಲ ನೀಡುವುದು ನಮ್ಮ ಕೆಲಸ. ಹಾಗಾಗಿ, ಪ್ರತಿಯೊಬ್ಬರನ್ನೂ ಗೌರವದಿಂದ, ಪ್ರೀತಿಯಿಂದ ಕಂಡು ನಮ್ಮ ಕೆಲಸದ ಬಗ್ಗೆ ಅವರಿಗೆ ಹೇಳಬೇಕು’. ಲೆಕ್ಕಪತ್ರದ ಪಾರದರ್ಶಕತೆ ಬಗ್ಗೆ ಅಷ್ಟೇ ಗಮನ ನೀಡಿದ್ದ ಅವರು ನಯಾಪೈಸೆ ವ್ಯತ್ಯಾಸವಾಗದಂತೆ ಕಾಳಜಿ ತೋರಿದ್ದರು.
ಆಯೋಗದ ಅಧ್ಯಕ್ಷರಾಗಿ ಅವರಿಗೆ ಸಂಪುಟದರ್ಜೆ ಸ್ಥಾನಮಾನವಿತ್ತು. ವಿಧಾನಸಭೆಯ ಎರಡನೇ ಮಹಡಿಯಲ್ಲಿ ಅವರಿಗೆ ನೀಡಿದ ಕಚೇರಿಯನ್ನೇ ಆಯೋಗದ ಕಚೇರಿಯಾಗಿಸಿ, ಪ್ರತ್ಯೇಕ ಕಚೇರಿಯ ಅವಶ್ಯಕತೆ ಇಲ್ಲ ಎಂದರು. ಅವರು ಆಫೀಸಿಗೆ ಬಂದಾಗ ಸಾಮಾನ್ಯರಂತೆ ಸೋಫಾದ ಮೇಲೆ ಕುಳಿತು ರ್ಚಚಿಸುತ್ತಿದ್ದರೆ ಹೊರತು ಅವರಿಗಾಗಿ ಪ್ರತ್ಯೇಕ ಚೇಂಬರ್ ತೆಗೆದುಕೊಳ್ಳಲಿಲ್ಲ. ಜ್ಞಾನ ಆಯೋಗದಲ್ಲಿ 2013ರವರೆಗೆ ಒಡನಾಟ ಮುಂದುವರಿಯಿತು. ಅವರು ಮುಂದಿನ ಸರ್ಕಾರದ ಅವಧಿಯಲ್ಲೂ ಮುಂದುವರಿದರು. ಅಂದಹಾಗೆ, ಕಸ್ತೂರಿರಂಗನ್ ಹಾಗೂ ನನ್ನ ನೇಮಕವಾಗಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಆದರೆ, ಮುಖ್ಯಮಂತ್ರಿ ಬದಲಾವಣೆ ಆದ ಬಳಿಕ ಇಬ್ಬರೂ ಕೂಡಲೇ ರಾಜೀನಾಮೆ ನೀಡಿದೆವು. ಆದರೆ, ಆಗ ಬಂದ ಹೊಸ ಮುಖ್ಯಮಂತ್ರಿಗಳು ನಮ್ಮ ಕರ್ತವ್ಯಸ್ಥಾನಗಳಲ್ಲಿ ಮುಂದುವರಿಯುವಂತೆ ಹೇಳಿದರು.
2017ರಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಅಧ್ಯಕ್ಷರಾದರು, ನಾನು ಸದಸ್ಯನಾದೆ. ಈ ಮೂಲಕ ಒಡನಾಟ ಮತ್ತೆ ಮುಂದುವರಿಯಿತು. ಅಲ್ಲದೆ, ಅಧ್ಯಕ್ಷರಾಗುವ ಪ್ರಸ್ತಾಪ ಅವರ ಮುಂದೆ ಬಂದಾಗ, ‘ನನ್ನ ತಂಡದಲ್ಲಿ ಎಂ.ಕೆ.ಶ್ರೀಧರ್ ಇದ್ದರೆ ಒಳ್ಳೆಯದು, ಮುಂಚೆ ಒಟ್ಟಿಗೆ ಕೆಲಸ ಮಾಡಿದ್ದೆವು’ ಎಂದು ಹೇಳಿದ್ದರು. ಈ ಕರಡನ್ನು ರೂಪಿಸುವಾಗ ಅವರು ತೋರಿದ ಶ್ರದ್ಧೆ, ಸಮರ್ಪಣೆ, ಖಚಿತತೆ ನಿಜಕ್ಕೂ ಅನನ್ಯ. ಆಯಾ ಕ್ಷೇತ್ರದ ಪರಿಣತರೊಂದಿಗೆ ರ್ಚಚಿಸಿಯೇ, ಅದರ ಸಾಧಕ-ಬಾಧಕಗಳನ್ನು ಅವಲೋಕಿಸಿಯೇ ಆ ಅಂಶಗಳನ್ನು ಕರಡಿನಲ್ಲಿ ಸೇರಿಸುತ್ತಿದ್ದರು. ಹೀಗೆ ಪರಿಣತರನ್ನು ಭೇಟಿ ಮಾಡಲು ರಾಷ್ಟ್ರದ ವಿವಿಧ ಭಾಗಗಳಿಗೆ ಪ್ರವಾಸ ಮಾಡಿದರು. ಕರಡು ರೂಪಿಸಿದ ಮೇಲೆ ಮತ್ತೆ ದೇಶದ ಏಳು ಮಹಾನ್ ವ್ಯಕ್ತಿಗಳಿಗೆ ಅದನ್ನು ಕಳುಹಿಸಿ ಅಭಿಪ್ರಾಯ ಪಡೆದುಕೊಂಡರು. ಅಂದರೆ, ನಾವು ಮಾಡುವ ಯಾವುದೇ ಕೆಲಸ ಪರಿಪೂರ್ಣವಾಗಿ ಇರಬೇಕು ಎಂದು ಬಯಸಿ, ಆ ನಿಟ್ಟಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಈ ಬಗ್ಗೆ ಅವರನ್ನು ಒಮ್ಮೆ ಕೇಳಿದಾಗ, ‘ನನಗೆ ಉಪಗ್ರಹಗಳನ್ನು ಉಡಾಯಿಸಿದ ಅನುಭವವಿದೆ. ಉಪಗ್ರಹ ಉಡಾವಣೆ ಆಗಬೇಕಾದರೆ ಸಾವಿರಾರು ಬಿಡಿಭಾಗಗಳನ್ನು ಸಮರ್ಪಕವಾಗಿ ಜೋಡಿಸಬೇಕು ಮತ್ತು ಅವು ಹೊಂದಾಣಿಕೆ ಆಗಬೇಕು. ಹೀಗೆ ಬೇರೆ ಕೆಲಸಗಳಲ್ಲೂ ಸಣ್ಣ ಸಣ್ಣ ಸಂಗತಿಗಳನ್ನು ಒಂದಾಗಿಸಬೇಕು’ ಎಂದಿದ್ದರು. ಶಿಕ್ಷಣ ನೀತಿ ರೂಪಿಸುವಾಗ ಜನರ ಮನಸ್ಸಿನಲ್ಲಿ ಇರುವುದನ್ನೂ ಆಲಿಸಿದರು. ಹೀಗೆ ಬಂದ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಮಾದರಿಯಾದರು.
ಮನೆಗೆ ಬರುವವರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ನಾನು ಅವರ ಮನೆಗೆ ಹೋದರೆ ಅಡುಗೆಯವನನ್ನು ಕರೆಸಿ ಊಟ ಸಿದ್ಧಪಡಿಸಿಡುತ್ತಿದ್ದರು. ನನ್ನ ಮನೆಗೆ ಬಂದಿದ್ದರು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಬಂದು, ಕಾಳಜಿ ತೋರಿದ್ದರು. ಅಲ್ಲದೆ, ಯುವ ಸಹೋದ್ಯೋಗಿಗಳ ಜತೆಗೆ ಸ್ನೇಹದಿಂದ ವರ್ತಿಸುತ್ತಿದ್ದರು, ಯುವಪ್ರತಿಭೆಗಳ ಮೇಲೆ ಕಸ್ತೂರಿರಂಗನ್ ಅವರಿಗೆ ಅಪಾರ ನಂಬಿಕೆ ಇತ್ತು. (ಲೇಖಕರು ಶಿಕ್ಷಣ ತಜ್ಞರು, ಸಂಶೋಧಕರು, ಕಸ್ತೂರಿರಂಗನ್ ಅವರ ಒಡನಾಡಿಗಳು)