ಬೆಕ್ಕು ಕಚ್ಚಿ ಮಹಿಳೆಯರಿಬ್ಬರು ಸಾವು! ಮೃತರಲ್ಲಿ ಒಬ್ಬಾಕೆ ವೈದ್ಯನ ಪತ್ನಿ... ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

cat
Published on

ವಿಜಯವಾಡ: ಬೆಕ್ಕು ಕಚ್ಚಿದ್ದರ ಪರಿಣಾಮ ಮಹಿಳೆಯರಿಬ್ಬರು ದುರಂತ ಅಂತ್ಯ ಕಂಡ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಮೃತರಲ್ಲಿ ಓರ್ವ ಮಹಿಳೆ ವೈದ್ಯರೊಬ್ಬರ ಪತ್ನಿ!

ನಿವೃತ್ತ ಆರ್‌ಟಿಸಿ ಕಂಡಕ್ಟರ್‌ ಸಾಲಿ ಭಾಗ್ಯರಾವ್‌ ಪತ್ನಿ ಕಮಲಾ(64) ಮತ್ತು ಆರ್‌ಎಂಪಿ ವೈದ್ಯ ಬೊದ್ದು ಬಾಬುರಾವ್‌ ಪತ್ನಿ ನಾಗಮಣಿಗೆ(43) ಮೃತ ದುರ್ದೈವಿಗಳು. ಇವರಿಬ್ಬರೂ ಕೃಷ್ಣಾ ಜಿಲ್ಲೆಯ ಮೊವ್ವ ಮಂಡಲದ ವೇಮುಲಮಾಡದ ಎಸ್‌ಸಿ ಕಾಲನಿಯ ನಿವಾಸಿಗಳು. 2 ತಿಂಗಳ ಹಿಂದೆ ಈ ಮಹಿಳೆಯರಿಗೆ ಬೆಕ್ಕೊಂದು ಕಚ್ಚಿತ್ತು. ಇಬ್ಬರೂ ಟಿಟಿ ಇಂಜೆಕ್ಷನ್‌ ತೆಗೆದುಕೊಂಡಿದ್ದರಾದರೂ ಇತ್ತೀಚಿಗೆ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು.

ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಕಮಲಾ ಮತ್ತು ನಾಗಮಣಿ ಇಬ್ಬರನ್ನೂ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮಾ.5ರಂದು ಗುಂಟೂರು ಜಿಲ್ಲೆಯ ಮಂಗಳಗಿರಿ ಎನ್‌ಆರ್‌ಐ ಆಸ್ಪತ್ರೆಯಲ್ಲಿ ಕಮಲಾ ಕೊನೆಯುಸಿರೆಳೆದರು. ಅತ್ತ ವಿಜಯವಾಡದ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ನಾಗಮಣಿ ಮೃತಪಟ್ಟಿದ್ದಾರೆ. ಮಹಿಳೆಯರಿಬ್ಬರಿಗೂ ರೇಬಿಸ್​ ಸೋಂಕು ತಗುಲಿತ್ತು. ದೇಹಪೂರ ವಿಷ ವ್ಯಾಪಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯಾಧಿಕಾರಿ ಡಾ.ಶಾಂತಿ ಶಿವರಾಮ ಕೃಷ್ಣರಾವ್ ತಿಳಿಸಿದ್ದಾರೆ.

ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಬೆಕ್ಕನ್ನು ಕಚ್ಚಿತ್ತಂತೆ. ಕೆಲ ದಿನಗಳ ಬಳಿಕ ಆ ಬೆಕ್ಕು ನಾಗಮಣಿ ಮತ್ತು ಕಮಲಾ ಅವರನ್ನು ಕಚ್ಚಿತ್ತು. ಬೆಕ್ಕಿಗೆ ರೇಬಿಸ್ ಇರುವ ಬಗ್ಗೆ ಅರಿಯದ ಮಹಿಳೆಯರು ಆ ವೇಳೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲವಂತೆ. ಆ ಹುಚ್ಚು ನಾಯಿ ಸತ್ತ ಕೆಲವೇ ದಿನಗಳಲ್ಲಿ ಆ ಬೆಕ್ಕು ಕೂಡ ಸತ್ತಿದೆ. ಇದೀಗ ಮಹಿಳೆಯರೂ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net