ಅಪಘಾತದಲ್ಲಿ ರಾಜಕಾಲುವೆಯಲ್ಲಿ ಬಿದ್ದ ದ್ವಿಚಕ್ರ ವಾಹನ ಸವಾರ

accident-15
Published on

ಬೆಂಗಳೂರು: ಅಪಘಾತದ ವೇಳೆ ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ದ್ವಿಚಕ್ರ ವಾಹನ ಸವಾರರನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರವು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಶುಕ್ರವಾರ ರಾತ್ರಿ ೧೦:೩೦ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೇಮಂತ್ ಕುಮಾರ್ (೨೭) ಎಂಬಾತ ಅಪಘಾತದ ರಭಸಕ್ಕೆ ಆಯತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆ ಬಿದ್ದಿದ್ದ. ಬ್ಯಾಟರಾಯನಪುರದ ನಿವಾಸಿಯಾಗಿದ್ದ ಹೇಮಂತ್ ಕುಮಾರ್ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ರಾತ್ರಿ ೧೦:೩೦ರ ವೇಳೆ ಕೆಲಸ ಮುಗಿಸಿ ವಾಪಾಸಾಗುತ್ತಿದ್ದಾಗ ಮೈಸೂರು ರಸ್ತೆಯ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ಹೇಮಂತ್ ದ್ವಿಚಕ್ರ ವಾಹನ ರಸ್ತೆ ಪಕ್ಕದಲ್ಲಿರುವ ವಿಭಜಕಕ್ಕೆ
ಡಿಕ್ಕಿಯಾಗಿತ್ತು. ಅಪಘಾತದ ರಭಸದಿಂದಾಗಿ ಹೇಮಂತ್ ಕುಮಾರ್ ಆಯತಪ್ಪಿ ರಸ್ತೆ ಪಕ್ಕದಲ್ಲಿದ್ದ ರಾಜಕಾಲುವೆಯೊಳಗೆ ಬಿದ್ದಿದ್ದ. ದ್ವಿಚಕ್ರ ಮೇಲೆಯೇ ಇದ್ದು ಹೇಮಂತ್ ಮಾತ್ರ ಹಾರಿ ಎರಡು ಸೇತುವೆಗಳ ಮಧ್ಯಭಾಗದಲ್ಲಿರುವ ರಾಜಕಾಲುವೆ ಒಳಗೆ ಹಾರಿ ಬಿದ್ದಿದ್ದು, ರಾತ್ರಿ ಸುರಿದಿದ ಮಳೆಯಿಂದಾಗಿ ನೀರಿನ ಹರಿವು ಹೆಚ್ಚು ಇದ್ದಿದ್ದರಿಂದ ಹೇಮಂತ್ ಕುಮಾರ್ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ. ಈ ಮಾಹಿತಿ ತಿಳಿದ ಕೂಡಲೇ ಜ್ಞಾನಭಾರತಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಾತ್ರಿ ಬಹಳ ಸಮಯದ ಕಾಲ ಕಾರ್ಯಾಚರಣೆ ನಡೆಸಿದ್ದರಾದರೂ ಹೇಮಂತ್ ಕುಮಾರ್ ಪತ್ತೆಯಾಗಿಲ್ಲ. ಹೀಗಾಗಿ ಕಾರ್ಯಾಚರಣೆ ಸ್ಥಳಗಿತಗೊಳಿಸಲಾಗಿತ್ತು. ಬಳಿಕ ರಾತ್ರಿ ಸ್ಥಗಿತಗೊಂಡಿದ್ದ ಶೋಧಕಾರ್ಯ ಶನಿವಾರ ಬೆಳಿಗ್ಗೆಯಿಂದ ಮತ್ತೆ ಪುನರಾರಂಭಗೊಂಡಿದ್ದು, ಇನ್ನೂ ಸಹ ಹೇಮಂತ್ ಕುಮಾರ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತತ 11 ಗಂಟೆಗಳ ಕಾರ್ಯಾಚರಣೆ:
ಸ್ಥಳದಲ್ಲಿ ಜ್ಞಾನಭಾರತಿ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಮತ್ತು ಜ್ಞಾನಭಾರತಿ ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ದುರ್ವಾಸೆ ಸಹಿತವಾದ ನೀರು ರಭಸವಾಗಿ ಬರುತ್ತಿದೆ ಮತ್ತು ಕೆಮಿಕಲ್ ಮಿಶ್ರಿತ ಗಲೀಜು ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಾಕಷ್ಟು ಹರಸಾಹಸಪಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೂ ಆತ ಪತ್ತೆಯಾಗಿಲ್ಲ. ಅಗ್ನಿ ಶಾಮಕ ದಳದ ಸಿಬ್ಬಂದಿ ಶನಿವಾರ ೭ ಗಂಟೆಯಿಂದ ಸಂಜೆ ೬ ಗಂಟೆವರೆಗೂ ಸತತ ೧೧ ಗಂಟೆಗಳ ಕಾರ್ಯಾಚರಣೆ ನಡೆಸಿದ್ದರೂ ಕೂಡ ಹೇಮಂತ್ ಕುಮಾರ್ ಇನ್ನು ಪತ್ತೆಯಾಗಿಲ್ಲ. ಹೇಮಂತ್ ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಪೊಲೀಸರು ಹೇಮಂತ್‌ಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ನಡೆಸುತ್ತಿರುವ ಶೋಧ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net