

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆಕ್ಕನಹಳ್ಳ ರಸ್ತೆಯಲ್ಲಿ ಪ್ರವಾಸಿಗನ ಮೇಲೆ ಕಾಡಾನೆ ದಾಳಿ(Elephant Attack) ನಡೆದಿದ್ದು, ಆನೆ ಕಾಲಿನಡಿ ಸಿಲುಕಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೇರಳ ಮೂಲದ ಪ್ರವಾಸಿಗ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಂಡೀಪುರ ರಸ್ತೆಯಲ್ಲಿ ಕಾಡಾನೆ ನಿಂತು ವಾಹನಗಳಲ್ಲಿ ನೀಡುವ ಆಹಾರ ತಿನ್ನುವ ಅಭ್ಯಾಸವಾಗಿ ಹೋಗಿದೆ. ಈ ರೀತಿ ರಸ್ತೆಯಲ್ಲಿ ನಿಂತಿದ್ದ ಆನೆಯನ್ನು ನೋಡಿದ ಪ್ರವಾಸಿಗರು ಕಾರಿನಿಂದ ಇಳಿದು ಹತ್ತಿರದಲ್ಲೇ ವೀಕ್ಷಿಸುತ್ತಿದ್ದರು.
ಈ ವೇಳೆ ಎದುರು ಇದ್ದ ಪ್ರವಾಸಿಗನೊಬ್ಬನ ಮೇಲೆ ಆನೆ ದಾಳಿ ಮಾಡಿದೆ. ಓಡುತ್ತಿದ್ದ ಪ್ರವಾಸಿಗ ಕೆಳಗೆ ಬಿದ್ದಾಗ ಆನೆ ತುಳಿಯಲು ಪ್ರಯತ್ನ ಮಾಡಿದೆ. ಆದರೆ ಪ್ರವಾಸಿಗನ ಅದೃಷ್ಟ ಚೆನ್ನಾಗಿದ್ದು, ಪ್ರಾಣ ಉಳಿದುಕೊಂಡಿದೆ. ಗಾಯಾಳುವನ್ನು ಜೊತೆಗೆ ಬಂದಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವ ಆಸ್ಪತ್ರೆಗೆ ಸೇರಿಸಲಾಗಿದೆ, ಪ್ರವಾಸಿಗನ ಹೆಸರು, ವಿಳಾಸ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆನೆ ದಾಳಿಯ ವಿಡಿಯೋ ವೈರಲ್ ಆಗಿದೆ.