

ಶಿವಮೊಗ್ಗ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ವಿರೋಧಿಸಿ ರಾಷ್ಟ್ರಭಕ್ತರ ಬಳಗದಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ದೈವಜ್ಞ ಕಲ್ಯಾಣಮಂದಿರ ಸಮೀಪದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ದುರ್ಗಿಗುಡಿ ಮೂಲಕ ಸಾಗಿ ಸೀನಪ್ಪ ಶೆಟ್ಟಿ ವೃತ್ತದ ಮೂಲಕ ಮಹಾವೀರ ವೃತ್ತ ತಲುಪಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾ ಸಭೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಇದೊಂದು ದಾರುಣ ಘಟನೆ. ಇದರ ಬಗ್ಗೆ ಮಾತನಾಡಲು ಬೇಸರವಾಗುತ್ತದೆ. ನೇಹಾಳನ್ನು ಕೊಂದ ಮುಸ್ಲಿಂ ಗೂಂಡಾ ಇನ್ನೂ ಜೀವಂತವಾಗಿದ್ದಾನೆ. ಆತನನ್ನು ಎನ್‌ಕೌಂಟರ್ ಮಾಡಬೇಕಿತ್ತು. ಇದು ರಾಕ್ಷಸೀಯ ಕೃತ್ಯ. ಹಿಂದುಗಳ ಮೇಲೆ ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಇದರಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಆತನನ್ನು ಗಲ್ಲಿಸಗೇರಿಸಬೇಕೆಂದು ಆಗ್ರಹಿಸಿದರು.
ಮಾಜಿ ಮೇಯರ್ ಸುವರ್ಣಾ ಶಂಕರ್ ಮಾತನಾಡಿ, ಇದೊಂದು ಬರ್ಬರ ಕೃತ್ಯ. ಹಿಂದು ಹೆಣ್ಣುಮಕ್ಕಳು ಕಾಲೇಜಿಗೆ ಹೋಗುವುದೇ ಅಪಾಯ ಎನ್ನುವ ಸನ್ನಿವೇಶವಿದೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದೇ ಕಷ್ಟವಾದೆ. ಈ ಘಟನೆಯನ್ನು ವೈಯಕ್ತಿಕ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದು ದುರದೃಷ್ಟಕರ ಎಂದರು.
ಬಳಗದ ಪ್ರಮುಖರಾದ ದಿಲೀಪ್ ಕುಮಾರ್ ಪಾಂಡೆ, ಕೆ.ಇ. ಕಾಂತೇಶ್, ಇ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಲಕ್ಷ್ಮೀ ಶಂಕರನಾಯ್ಕ, ಅನಿತಾ, ಬಾಲು, ಆನಂದ್, ಶಂಕರ್ ಗನ್ನಿ, ಸತ್ಯನಾರಾಯಣ್, ಮೋಹನ್, ಸೀತಾಲಕ್ಷ್ಮೀ, ವೆಂಕಟೇಶ್, ಆರತಿ ಆ.ಮ.ಪ್ರಕಾಶ್ ಮುಂತಾದವರಿದ್ದರು.