

ಸೊರಬ: ಆಧುನಿಕತೆಯ ಭರಾಟೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಪಾರಂಪರಿಕವಾಗಿ ಬಂದ ನಮ್ಮ ಗ್ರಾಮೀಣ ಸೊಗಡಿನ ಸಂಸ್ಕೃತಿ ಅವಸಾನದ ಅಂಚಿನಲ್ಲಿದೆ ಎಂದು ಹಸೆ ಚಿತ್ತಾರ ಕಲಾವಿದ ಚಂದ್ರಶೇಖರ ಸಿರವಂತೆ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಗೋಪಾಲ, ಗಣಪತಿ ಎಂಬುವವರ ಹೊಲದಲ್ಲಿ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಣ ಹಬ್ಬದ ಭತ್ತದ ರಾಶಿಗೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಶ್ರೀಮಂತ ಪರಂಪರೆಯಲ್ಲಿ ಜನಪದರ ಬದುಕು-ಬವಣೆಗಳು, ರೀತಿ-ನೀತಿಗಳು ಹಾಸುಹೊಕ್ಕಾಗಿವೆ. ಬಡ ಕುಟುಂಬಗಳು ಹೈನುಗಾರಿಕೆ, ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಆದರೆ ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದಿರುವುದು ದುರಂತ. ಸರ್ಕಾರಗಳು ರೈತರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಯೋಚಿಸಬೇಕು. ಆಧುನಿಕತೆ ಜನಪದರ ಬದುಕನ್ನು ಕಸಿಯುತ್ತಿದೆ. ಗ್ರಾಮೀಣ ಸಂಸ್ಕೃತಿಯ ಒಕ್ಕಲುತನ, ಕಣ ಹಬ್ಬಗಳು ಉಳಿದಾಗ ಮಾತ್ರ ಮುಂದಿನ ಪೀಳಿಗೆಗೆ ಈ ಪರಂಪರೆಯ ಅರಿವು ಮೂಡಿಸಲು ಸಾಧ್ಯ ಎಂದರು.
ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ, ಸುಗ್ಗಿ ಸಂಭ್ರಮ ಕಣ ಹಬ್ಬ, ಒಕ್ಕಲುತನ ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಮುಂಬರುವ ಪೀಳಿಗೆಗೆ ಪರಿಚಯಿಸುವ, ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಗೌರಮ್ಮ ಭಂಡಾರಿ, ಶೈಲಾ ಹೆಬ್ಬಾರ್, ಗಣಪತಿ, ಸುಬ್ರಹ್ಮಣ್ಯ ಗುಡಿಗಾರ್, ರಮೇಶ್ ಮಂಚಿ, ಪ್ರಶಾಂತ್ ಹುಣವಳ್ಳಿ, ರೇಣುಕಮ್ಮ ಗೌಳಿ, ಸರಸ್ವತಿ ನಾವುಡ, ಲಲಿತಾ, ಸವಿತಾ, ಮಮತಾ, ವಿಶ್ವನಾಥ್, ಗೋಪಾಲ ಇತರರಿದ್ದರು.