ಗೆದ್ದಲು ಹಿಡಿಯುತ್ತಿರುವ ಪುಸ್ತಕ ಮನೆ

book 1
ಸಾಹಿತಿ ಹರಿಹರಪ್ರಿಯ ಅವರ ಮನೆಯಲ್ಲಿ ಕಪಾಟುಗಳಿಲ್ಲದೆ ಪುಸ್ತಕಗಳನ್ನು ನೆಲದಲ್ಲಿ ರಾಶಿ ಹಾಕಿರುವುದು.
Published on

ಕೆ.ಆರ್.ಚಂದ್ರಶೇಖರ್ ಲಕ್ಕೂರು
ಸಮರ್ಪಕವಾಗಿ ಸಂಗ್ರಹಿಸಿದ್ದರೆ ಭವಿಷ್ಯದಲ್ಲಿ ಸಾಕಷ್ಟು ಜನರ ಜ್ಞಾನದ ದೀವಿಗೆಯಾಗುತ್ತಿದ್ದ ಲಕ್ಷಾಂತರ ಪುಸ್ತಕಗಳು ಈಗ ಗೆದ್ದಲು ಹುಳುಗಳ ಪಾಲಾಗುತ್ತಿವೆ.


ಹೌದು. ಸಾಹಿತಿ ಹರಿಹರಪ್ರಿಯ ಸಂಗ್ರಹಿಸಿರುವ ‘ಪುಸ್ತಕ ಮನೆ’ಯಲ್ಲಿ ಕನ್ನಡ ಹಾಗೂ ತೆಲುಗು ಸೇರಿ ವಿವಿಧ ಭಾಷೆಯ 20 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳಿದ್ದು, ಸಮರ್ಪಕ ನಿರ್ವಹಣೆ ಕೊರತೆಯಿಂದ ಪುಸ್ತಕಗಳು ಗೆದ್ದಲು ಹಿಡಿಯುತ್ತಿವೆ. ಇದನ್ನು ಕಂಡು ಹಿರಿಯ ಸಾಹಿತಿ ಹರಿಹರಪ್ರಿಯ ಮುಮ್ಮಲ ಮರುಗಿದ್ದಾರೆ.


ತಿ.ತಾ. ಶರ್ಮ, ಕುವೆಂಪು, ಶ್ರೀರಂಗ, ಪುತಿನ, ಎಂ.ಎಂ.ಕಲಬುರ್ಗಿ, ಮಾಸ್ತಿ, ಗೊರೂರು, ರಂ.ಶ್ರೀ.ಮುಗುಳಿ, ಅನಕೃ, ಬೀಚಿ, ಎಸ್.ಎಲ್.ಬೈರಪ್ಪ, ಎಚ್‌ಎಸ್‌ಕೆ, ಶಂಭಾ ಜೋಷಿ, ಚಂದ್ರಶೇಖರ ಪಾಟೀಲ, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ಚದುರಂಗ, ಬಸವರಾಜ ಕಟ್ಟಿಮನಿ, ಲಂಕೇಶ್ ಸೇರಿ ಹಲವು ಸಾಹಿತಿಗಳ ಒಡನಾಟ ಹಾಗೂ ಒಂದು ಕಾಲದಲ್ಲಿ ಚಲನಚಿತ್ರನಟ ರಜಿನಿಕಾಂತ್, ಹೆಸರಾಂತ ನಿರ್ದೇಶಕ ಹುಲಿ ಚಂದ್ರಶೇಖರ್ ಅವರೊಂದಿಗೆ ಒಂದೇ ಕೋಣೆಯಲ್ಲಿ ಜೀವನ ನಡೆಸಿದ್ದ ಹರಿಹರಪ್ರಿಯ ಅವರು ಇಂದು ಮಾಲೂರು ಕೈಗಾರಿಕಾ ಪ್ರದೇಶದ ‘ಪುಸ್ತಕಮನೆ’ಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.


ಮಾಲೂರು-ಹೊಸೂರು ಮುಖ್ಯರಸ್ತೆಯ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿಯ ಬಡಾವಣೆಯಲ್ಲಿ ಹರಿಹರಪ್ರಿಯರು ಮಗಳ ನಿವೇಶನದಲ್ಲಿ ಪುಸ್ತಕಮನೆ ನಿರ್ಮಾಣ ಮಾಡಿದ್ದು, 20 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳಿವೆ. ಆದರೆ, ಮೂಲಸೌಕರ್ಯ ಹಾಗೂ ಭದ್ರತೆ ಇಲ್ಲದಂತಾಗಿದ್ದು, ಅಜ್ಞಾನದ ಕತ್ತಲು ಸರಿಸಿ ಜ್ಞಾನದ ಬೆಳಕು ನೀಡಬೇಕಿದ್ದ ಪುಸ್ತಕಗಳು ನಿಷ್ಪ್ರಯೋಜಕವಾಗಿವೆ.

ಪುಸ್ತಕಗಳನ್ನು ಗೆದ್ದಲು ತಿಂದು ಹಾಕಿರುವುದು.
ಪುಸ್ತಕಗಳನ್ನು ಗೆದ್ದಲು ತಿಂದು ಹಾಕಿರುವುದು.


ಈ ನಿವೇಶನದಲ್ಲಿ ಸ್ಥಳಾವಕಾಶ ಕಡಿಮೆ, ಸರ್ಕಾರ ಮುಂದೆ ಬಂದು 2 ಎಕರೆ ಜಮೀನು ನೀಡಿದರೆ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು, ಇಲ್ಲವಾದರೆ ಯಾರಾದರೂ ಪುಸ್ತಕಪ್ರೇಮಿಗಳಿಗೆ ಜವಾಬ್ದಾರಿ ವಹಿಸಲಾಗುವುದು ಎಂಬುದು ಹಿರಿಯ ಸಾಹಿತಿಯ ಮನದ ಇಂಗಿತ.

600 ಸಾಹಿತಿಗಳ ಸಮಗ್ರ ಸಾಹಿತ್ಯ ಲಭ್ಯ
ಈ ಪುಸ್ತಕ ಮನೆಯಲ್ಲಿ ಕವಿರಾಜಮಾರ್ಗದಿಂದ ಹಿಡಿದು ಈಗಿನ ಆಧುನಿಕ ಸಾಹಿತಿಗಳ ಪುಸ್ತಕಗಳನ್ನೂ ಕಾಣಬಹುದಾಗಿದೆ. ಸುಮಾರು 600 ಸಾಹಿತಿಗಳ ಸಮಗ್ರ ಸಾಹಿತ್ಯ ಇವರ ಸಂಗ್ರಹಲ್ಲಿದೆ. ಅಲ್ಲದೇ ವಿಶೇಷವಾಗಿ ಕವಿರಾಜಮಾರ್ಗದ ಎಲ್ಲ ಸಂಪಾದನೆಯ ಆವೃತ್ತಿಗಳನ್ನು ಇವರು ಕಾಪಿಟ್ಟುಕೊಂಡು ಬಂದಿದ್ದಾರೆ. ಆದರೆ, ಸ್ಥಳದ ಕೊರತೆಯಿಂದಾಗಿ ಈ ಸಂಗ್ರಹಗಳಿಗೆ ತೊಂದರೆಯಾಗಿದೆ.

ವಿವಿಧ ವಿಭಾಗ
ಹಲವಾರು ವರ್ಷಗಳಿಂದ ಪುಸ್ತಕ ಸಂಗ್ರಹಿಸಿದ್ದಾರೆ. ಸಂಸ್ಕೃತಿ, ಲಲಿತಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಹಾಗೂ ವಿಮರ್ಶೆ, ಸಂಶೋಧನ ಗ್ರಂಥಗಳನ್ನು ವಿಭಾಗವಾರು ವಿಂಗಡಿಸಿ ಜೋಡಿಸಿದ್ದಾರೆ. ಸಾಹಿತ್ಯಕ್ಕೆ ಬೇಕಾದ ಎಲ್ಲ ಆಕರ ಗ್ರಂಥಗಳು ಲಭ್ಯ ಇವೆ. ಇವರ ಆಕರ ಗ್ರಂಥಗಳ ಸಂಗ್ರಹಕ್ಕೆ ಸಾಹಿತಿ ಕಿ.ರಂ. ನಾಗರಾಜ್ ಅವರು ಹರಿಹರಪ್ರಿಯ ಅವರನ್ನು ಆಕರ ವಿಜ್ಞಾನಿ ಎಂದೇ ಸಂಭೋಧಿಸಿದ್ದರು. ಸಾಹಿತ್ಯ ಕೃತಿಗಳಲ್ಲದೆ ಸುಮಾರು 400 ವರ್ಷಗಳ ಹಿಂದಿನ ಕನ್ನಡ, ಇಂಗ್ಲಿಷ್, ತೆಲುಗು ಭಾಷೆಯ ಸಾಂಸ್ಕೃತಿಕ ಪತ್ರಿಕೆಗಳನ್ನು ಸಂಗ್ರಹಿಸಿರುವುದು ವಿಶೇಷ.

ಮೂಲಸೌಲಭ್ಯ ಕೊರತೆ
ಸಾಹಿತಿ ಹರಿಹರಪ್ರಿಯ ಈ ಮನೆಗೆ ಬಂದು 1 ವರ್ಷ ಕಳೆದಿದೆ. ಆದರೆ, ಗ್ರಾಪಂ ಮೂಲಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರು, ಚರಂಡಿ, ವಿದ್ಯುತ್ ದೀಪ ಯಾವುದೂ ಇಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಇಲ್ಲಿ ಯಾವುದೇ ಭದ್ರತೆ ಇಲ್ಲದೆ ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗಿದ್ದು, ದುಷ್ಕರ್ಮಿಗಳು ಬಾಗಿಲು ಬಡಿದು ತೊಂದರೆ ನೀಡುತ್ತಿರುವ ಬಗ್ಗೆ ಹರಿಹರಪ್ರಿಯ ನೋವು ತೋಡಿಕೊಂಡಿದ್ದಾರೆ.

ಪುಸ್ತಕಗಳ ಸಂಗ್ರಹಕ್ಕಿಲ್ಲ ಭದ್ರತೆ
ಪುಸ್ತಕ ಮನೆಯ ಲಕ್ಷಾಂತರ ಪುಸ್ತಕಗಳು ಕಪಾಟುಗಳಿಲ್ಲದೆ ಗೆದ್ದಲು ತಿನ್ನುತ್ತಿವೆ. ರಾತ್ರಿ ನೋಡಿದ ಪುಸ್ತಕಗಳು ಬೆಳಗ್ಗೆ ಅರ್ಧ ಮಾಯವಾಗಿರುತ್ತವೆ. ನೋಡಿದರೆ ಗೆದ್ದಲು ತಿಂದು ಹಾಳು ಮಾಡುತ್ತಿವೆ. ಪುಸ್ತಕಗಳ ರಕ್ಷಣೆೆಗೆ ಕಬ್ಬಿಣ ಇಲ್ಲವೇ ಗುಣಮಟ್ಟದ ಕಪಾಟುಗಳ ಅಗತ್ಯವಿದೆ. ಕನ್ನಡ ಸಂಸ್ಕೃತಿ ಇಲಾಖೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಈ ಜ್ಞಾನ ಭಂಡಾರದ ರಕ್ಷಣೆಗೆ ಮುಂದಾಗಬೇಕಿದೆ.

ಬೇಡಿಕೆಗಳು ಏನು
1.ಪುಸ್ತಕ ಮನೆಗೆ 2 ಎಕರೆ ಭೂಮಿ

2.ಪುಸ್ತಕ ಸಂಗ್ರಹಕ್ಕೆ 5000 ಬೀರುಗಳು ಅವಶ್ಯ


ನಿವೇಶನ ಅಭಿವೃದ್ಧಿ ಬಗ್ಗೆ ಗೃಹಮಂಡಳಿಯಲ್ಲಿ ವಿಚಾರಿಸಿದರೆ ಆರ್‌ಎಂಪಿ ಸಂಸ್ಥೆಗೆ ವರ್ಗಾಯಿಸಲಾಗಿದೆ ಎನ್ನುತ್ತಾರೆ. ಆರ್‌ಎಂಪಿಯಲ್ಲಿ ನೊಸಗೆರೆ ಪಂಚಾಯಿತಿಗೆ ವರ್ಗಾಯಿಸಿದ್ದೇವೆ ಎನ್ನುತ್ತಾರೆ. ಬಡಾವಣೆಯ ನಿವೇಶನ ಶುಲ್ಕ ಸಂಗ್ರಹ ಮಾಡುವ ನೊಸಗೆರೆ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಗೃಹ ಮಂಡಳಿ ನಮಗೆ ವರ್ಗಾವಣೆ ಮಾಡಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಬಡಾವಣೆಯಲ್ಲಿರುವವರ ಕಷ್ಟ ಹೇಳತೀರದಾಗಿದೆ.
ಹರಿಹರಪ್ರಿಯ, ಸಾಹಿತಿ


ಹರಿಹರಪ್ರಿಯರ ಈ ಸಾಹಿತ್ಯ ಭಂಡಾರವನ್ನು ರಾಜ್ಯದ ಪುಸ್ತಕ ಪ್ರಿಯರ ಅನುಭವಿಸಬೇಕು. ಇಲ್ಲಿ ಅಗಾಧವಾದ ಪುಸ್ತಕಗಳ ಸಂಗ್ರಹಣೆಯು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದೇಶದ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪುಸ್ತಕಮನೆ ವಿಶ್ವಕೋಶ ಎನ್ನಬಹುದು. ಸರ್ಕಾರ ಇಂತಹ ವಿಶೇಷ ಹಾಗೂ ವಿಭಿನ್ನತೆಯ ಗ್ರಂಥ ಭಂಡಾರವನ್ನು ಕಾಪಾಡಲು ಅನುಕೂಲಕಲ್ಪಿಸಬೇಕು.
ಚಂದ್ರಶೇಖರ್‌ಗೌಡ, ಮಾಜಿ ಅಧ್ಯಕ್ಷರು, ನೊಸಗೆರೆ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net