

ಜಗತ್ತು ತಂತ್ರಜ್ಞಾನದಲ್ಲಿ ವಿಪರೀತ ಎನ್ನಿಸುವಷ್ಟು ಮುಂದುವರಿದಿದೆ ಮತ್ತು ಮುಂದುವರಿಯುತ್ತಿದೆ. ಹೊಸಹೊಸ ತಂತ್ರಜ್ಞಾನಗಳನ್ನು ಒಂದಲ್ಲ ಒಂದು ದೇಶ ಪರಿಚಯಿಸುತ್ತಲೇ ಇದೆ. ವಾಸ್ತವ ತಿಳಿಸುವ, ಭ್ರಮೆ ಸೃಷ್ಟಿಸುವ, ಚಂದ್ರನೆಡೆಗೆ ಕರೆದೊಯ್ಯುವ, ಸೂರ್ಯನ ಸ್ಥಿತಿ ತಿಳಿಸುವ ಹೀಗೆ. ಈಗೀಗ ಮನುಷ್ಯ ತಂತ್ರಜ್ಞಾನದಿಂದ ಏನು ಬೇಕಾದರೂ ಮಾಡಬಲ್ಲ, ಏನನ್ನಾದರೂ ಕಾಣಬಲ್ಲ...!
ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈಗ ಇದೇ ತಂತ್ರಜ್ಞಾನ ಒಂದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಿ, ಜಗತ್ತಿನೆದುರು ಅದನ್ನು ತೆರೆದಿಟ್ಟಿದೆ. ಕಣ್ಣಲ್ಲಿ ನೀರು ತುಂಬುವ, ಕರುಳು ಕಿವುಚುವ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ) ಯೂಟ್ಯೂಬ್, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲದೆ, ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಕೊರಿಯಾದಲ್ಲಿ ನಡೆದ ವಾಸ್ತವ ಘಟನೆ ಇದು. ತಮ್ಮ ಮೃತ ಮಗಳನ್ನು ಅಮ್ಮ ಸುಧಾರಿತ ವರ್ಚ್ಯುವಲ್ ರಿಯಾಲಿಟಿ (ಕಂಪ್ಯೂಟರೀಕೃತ 3D ತಂತ್ರಜ್ಞಾನ) ಮೂಲಕ ನೋಡಿದ್ದಾರೆ. ಅವಳ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಕಣ್ಣಾಮುಚ್ಚಾಲೆ ಆಡಿದ್ದಾರೆ. ಆ ಪುಟ್ಟ ಮಗು ಅಮ್ಮನಿಗೆ ಒಂದು ಪತ್ರ ಬರೆದಿದ್ದಾಳೆ. ಅಮ್ಮ ಹಾಗೂ ಮೃತ ಮಗಳು ಪರಸ್ಪರ ಮಾತನಾಡಿಕೊಂಡಿದ್ದಾರೆ...!
ದಕ್ಷಿಣ ಕೊರಿಯಾದ ದಂಪತಿಯ ಆರುವರ್ಷದ ಮಗಳು 2016ರಲ್ಲಿ ಲ್ಯುಕೇಮಿಯಾದಿಂದ ಸಾವನ್ನಪ್ಪಿದ್ದಾಳೆ. ಅದೇ ಮಗಳೊಟ್ಟಿಗೆ ಅಮ್ಮ ಈಗ ಮಾತನಾಡಿದ್ದಾಳೆ. 9 ನಿಮಿಷಗಳ ವಿಡಿಯೋ ನೋಡಿದರೆ ಎಂತಹವರ ಮನವೂ ಮಿಡಿಯುತ್ತದೆ.
ಒಂದು ಸುಂದರ ಉದ್ಯಾನವನ...ಅಲ್ಲಿ ಮರದ ತುಂಡುಗಳ ರಾಶಿಯಿದೆ. ತಾಯಿ ಜಂಗ್ ಜಿ-ಸುಂಗ್ ಅಲ್ಲಿ ನಿಂತು ಮಗಳನ್ನು ಕರೆಯುತ್ತಾರೆ. ಎಲ್ಲಿದ್ದೀಯಾ..ಬಾ ಎಂದು ಕೂಗುತ್ತಾರೆ. ಆಗ ಮರದ ತುಂಡುಗಳ ಹಿಂದಿನಿಂದ ಮಗಳು ನಾ-ಯೆಯಾನ್ಮ, ಅಮ್ಮ ಎನ್ನುತ್ತ ಓಡಿ ಬರುತ್ತಾಳೆ. ಆಕೆ ಗುಲಾಬಿ ಬಣ್ಣದ ಅಂಗಿ ತೊಟ್ಟು, ಅದೇ ಬಣ್ಣದ ಪುಟ್ಟ ಸೈಡ್ ಬ್ಯಾಗ್ ಹಾಕಿಕೊಂಡಿದ್ದಾಳೆ.
ಅಮ್ಮಾ ನಾನು ನಿನ್ನ ಮಿಸ್ ಮಾಡಿಕೊಳ್ಳುತ್ತೇನೆ ಎನ್ನುತ್ತಾಳೆ. ಅಮ್ಮನೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಾಳೆ. ಜಂಗ್ ಜಿ-ಸುಂಗ್ ಕೂಡ ಪುಟ್ಟ ಮಗುವನ್ನು ಮುಟ್ಟಲು ಕೈ ಮುಂದೆ ಮಾಡುತ್ತಾರೆ. ಹೀಗೆ ಸುಮಾರು 9 ನಿಮಿಷ ಅವರು ಜತೆಯಾಗಿ ಆಡುತ್ತಾರೆ, ಮಾತನಾಡುತ್ತಾರೆ.
ಆದರೆ ಇದೆಲ್ಲ ವಿಡಿಯೋದಲ್ಲಿ ಕಾಣಿಸುವುದು ವಾಸ್ತವ ಅಲ್ಲ. ಕಂಪ್ಯೂಟರ್ನಿಂದ ಸೃಷ್ಟಿಸಲಾದ ಒಂದು ಕೃತಕ ಲೋಕ. ಆದರೆ ತಾಯಿಯ ಪಾಲಿಗೆ, ಆ ಕ್ಷಣದ ಮಟ್ಟಿಗೆ ಮಗಳೇ ಎದುರು ಇದ್ದಾಳೆ. ನಾನು ಮಗಳೊಟ್ಟಿಗೇ ಇದ್ದೇನೆ ಎಂಬ ಭಾವ.
ವಾಸ್ತವವಾಗಿ ತಾಯಿ ಜಂಗ್ ಜಿ-ಸುಂಗ್ ಇರುವುದು ಒಂದು ಹಸಿರು ಪರದೆಯುಳ್ಳ ಸ್ಟುಡಿಯೋದಲ್ಲಿ. ಆಕೆ ವರ್ಚ್ಯುವಲ್ ರಿಯಾಲಿಟಿ (ಮಿಥ್ಯಾವಾಸ್ತವ ವೀಕ್ಷಕ) ಹೆಡ್ಸೆಟ್ ಹಾಕಿಕೊಂಡಿದ್ದಾರೆ. ಅದೇ ಕಾರಣಕ್ಕೆ ಆಕೆಗೆ ತಾನೆಲ್ಲೋ ಬೇರೆಯದೇ ಲೋಕದಲ್ಲಿ ಇದ್ದಂತೆ ಭಾಸವಾಗುತ್ತಿದೆ.
ಈ ಸನ್ನಿವೇಶಕ್ಕೆ ಮಹಿಳೆಯ ಪತಿ ಮತ್ತು ಮೂವರು ಮಕ್ಕಳು ಸಾಕ್ಷಿಯಾಗಿದ್ದಾರೆ. ಜಂಗ್ ಜಿ-ಸುಂಗ್ ಅವರು ತಾವು ಮೃತ ಮಗಳೊಂದಿಗೇ ಇದ್ದೇವೇನೋ ಎಂದುಕೊಂಡು ಮಾಡುವ ಹಾವಭಾವಗಳನ್ನು ನೋಡಿ ಅವರ ಪತಿ, ಮಕ್ಕಳು ಕೂಡ ಕಣ್ಣೀರು ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದು ಐ ಮೆಟ್ ಯೂ ಹೆಸರಿನ ಸಾಕ್ಷ್ಯಚಿತ್ರ. ಜಂಗ್ ಜಿ-ಸುಂಗ್ ಅವರು ವರ್ಚ್ಯುವಲ್ ರಿಯಾಲಿಟಿಯಲ್ಲಿ ನೋಡಿದ ದೃಶ್ಯಗಳನ್ನು ಮತ್ತು ಅವರು ಸ್ಟುಡಿಯೋದಲ್ಲಿ ಇದ್ದುದ್ದನ್ನು, ಅವರನ್ನು ನೋಡಿ ಪತಿ ಮಕ್ಕಳು ಕಣ್ಣೀರು ಸುರಿಸುವ ದೃಶ್ಯಗಳನ್ನು ಎಡಿಟಿಂಗ್ ಮಾಡಿ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ. ವಾರದ ಹಿಂದಷ್ಟೇ ಪೋಸ್ಟ್ ಆದ ವಿಡಿಯೋವನ್ನು ಈಗಾಗಲೇ 13 ಮಿಲಿಯನ್ಗೂ ಅಧಿಕ ಜನರು ವೀಕ್ಷಿಸಿದ್ದಾರೆ.
ತಾವೂ ಸಹ ತಮ್ಮ ಮೃತಪಟ್ಟ ಆತ್ಮೀಯರನ್ನು ನೋಡಬೇಕು ಎಂದು ಹಲವರು ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇಂತಹ ಸಾಕ್ಷ್ಯಚಿತ್ರಗಳಿಂದ ನೋವೇ ಹೆಚ್ಚು. ಭ್ರಮೆ ಒಳ್ಳೆಯದಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)
(ವರ್ಚ್ಯುವಲ್ ರಿಯಾಲಿಟಿ ಎಂದರೆ ಕಂಪ್ಯೂಟರೀಕೃತ 3D ತಂತ್ರಜ್ಞಾನ. ಈ ವರ್ಚ್ಯುವಲ್ ರಿಯಾಲಿಟಿ ಹೆಡ್ಸೆಟ್ಗಳನ್ನು ಧರಿಸಿದರೆ ನಮ್ಮೆದರು ಒಂದು ಕೃತಕ 3D ಲೋಕ ಸೃಷ್ಟಿಯಾಗುತ್ತದೆ)