

ಚೆನ್ನೈ: ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಿದ "ನೀಟ್-2022'' ಪರೀಕ್ಷೆಯ ಫಲಿತಾಂಶವು ಸೆ.7ರ ತಡರಾತ್ರಿ ಪ್ರಕಟಗೊಂಡಿದ್ದು, ಅನುತ್ತೀರ್ಣವಾಗಿದ್ದಕ್ಕೆ ನೊಂದ 19 ವರ್ಷದ ಯುವತಿಯೊಬ್ಬಳು ಆಹ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ 19 ವರ್ಷದ ಯುವತಿ ಮೃತೆ. ಜು.17ರಂದು ನೀಟ್(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆದಿತ್ತು. 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ತಿರುವಳ್ಳೂರು ಜಿಲ್ಲೆಯ ಈ ಯುವತಿಯೂ ಪರೀಕ್ಷೆ ಬರೆದಿದ್ದಳು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಬುಧವಾರ ತಡರಾತ್ರಿ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ.
ಗುರುವಾರ ಬೆಳಗ್ಗೆ ಯುವತಿಯ ಶವ ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೀಟ್ ಎಕ್ಸಾಂನಲ್ಲಿ ಅನುತೀರ್ಣಗೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.