

ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯ ಪ್ರಕರಣ ಸಂಬಂಧ ಸಿಎಂ ಉದ್ಧವ್ ಠಾಕ್ರೆ ಪ್ರಯೋಗಿಸಿದ್ದ ಶಾಸಕ ಸ್ಥಾನ ಅನರ್ಹತೆ ಅಸ್ತ್ರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಏಕ್ನಾಥ್ ಶಿಂಧೆ ತಂಡಕ್ಕೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಶಿಂಧೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್, ಶಾಸಕರ ಅನರ್ಹತೆ ನಿರ್ಧಾರಕ್ಕೆ ತಡೆ ನೀಡಿದೆ. ಈ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
ಏಕ್ನಾಥ್ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಾಸಕರ ಅನರ್ಹತೆ ನಿರ್ಧಾರ ಕೈಗೊಳ್ಳದಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಡೆಪ್ಯೂಟಿ ಸ್ಪೀಕರ್ಗೆ ನೋಟಿಸ್ ಜಾರಿ ಮಾಡಿದೆ. 5 ದಿನಗಳ ಒಳಗೆ ಉತ್ತರಿಸುವಂತೆ ಕಾಲಾವಕಾಶ ನೀಡಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದೆ. ಶಿಂಧೆ ಬಣದ ಶಾಸಕರಿಗೆ ಭದ್ರತೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನಾ ಮುಖಂಡ ಏಕನಾಥ ಶಿಂದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. 16 ಶಾಸಕರಿಗೆ ಉಪಸಭಾಪತಿ ನರಹರಿ ಜಿರ್ವಾಲ್ ಹೊರಡಿಸಿದ್ದ ಅನರ್ಹತೆಯ ನೋಟಿಸ್ ಅನ್ನು ಶಿಂಧೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತಮ್ಮನ್ನು ತೆಗೆದು ಬೇರೆಯವನ್ನು ನೇಮಿಸಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.