ಕಲೆಗೆ ಪ್ರೋತ್ಸಾಹಿಸಲು ಸೂಕ್ತ ವೇದಿಕೆ ಅವಶ್ಯ

17sgr3
ಸಾಗರದಲ್ಲಿ ಸಾಗರಿಕ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೀನಾಸಂ ನಿವೃತ್ತ ಪ್ರಾಚಾರ್ಯ ಕೆ.ಜಿ.ಮಹಾಬಲೇಶ್ವರ ಅವರನ್ನು ಅಭಿನಂದಿಸಲಾಯಿತು. ಸಿ.ಟಿ.ಬ್ರಹ್ಮಾಚಾರ್, ಜಯಪ್ರಕಾಶ್ ಮಾವಿನಕುಳಿ, ಮ.ಸ.ನಂಜುಂಡಸ್ವಾಮಿ, ಟಿ.ಎಸ್.ರಾಘವೇಂದ್ರ ಇತರರಿದ್ದರು.
Published on

ಸಾಗರ: ಕಲಾವಿದರು ಮತ್ತು ಆಯೋಜಕರು ಚರ್ಚಿಸಿ ಕಾರ್ಯಕ್ರಮ ನಡೆಸುವುದರಿಂದ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂದು ಸಂಘಟಕ ಮ.ಸ.ನಂಜುಂಡಸ್ವಾಮಿ ಹೇಳಿದರು.

ವಿಜಯನಗರದ ಶ್ರೀಧರ ಸಭಾಂಗಣದಲ್ಲಿ ಸಾಗರಿಕ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಕಲಾವಿದರು ಎಲ್ಲರೂ ಒಂದೆಡೆ ಸೇರುವಂತಾಗಬೇಕು. ಇದರಿಂದ ಕಲಾವಿದರ ಪರಿಚಯ ಹಾಗೂ ಅವರ ಕಾರ್ಯಕ್ರಮಗಳ ಪರಿಚಯ ಪರಸ್ಪರ ಆಗುತ್ತದೆ. ಕಲೆಗೆ ಪ್ರೋತ್ಸಾಹಿಸಲು ಬೇಕಾದ ವೇದಿಕೆ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಸಾಗರಿಕ ಸಾಂಸ್ಕೃತಿಕ ವೇದಿಕೆಯು ಹಳಗನ್ನಡ, ನಡುಗನ್ನಡ ಬಳಸಿ ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳ ಅರೆನಾಟಕ ಹಡೆದ ಕೊಡಲಿಗಳು ಪ್ರದರ್ಶಿಸಲು ತಯಾರಿ ನಡೆಸಿದೆ. ಸಂಘಟನೆಯಲ್ಲಿ ಬಹುತೇಕ ಗೃಹಿಣಿಯರು ಕೌಟುಂಬಿಕ ನಿರ್ವಹಣೆ ಜತೆ ನಾಟಕದಲ್ಲಿ ಪಾತ್ರಧಾರಿಗಳಾಗುತ್ತಿದ್ದಾರೆ. ಇಂತಹ ಪ್ರಯತ್ನಗಳಿಗೆ ಪ್ರೋತ್ಸಾಹ ಅವಶ್ಯ ಎಂದರು.
ರಂಗಕರ್ಮಿ ಡಾ. ಟಿ.ಎಸ್.ರಾಘವೇಂದ್ರ ಮಾತನಾಡಿ, ಹಳೆಗನ್ನಡ ಎಂಬುದು ಕನ್ನಡ ಉಪನ್ಯಾಸಕರಿಗೆ ಬೇಡ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಇದೇ ವೇಳೆ ಖಾಸಗಿ ವ್ಯಕ್ತಿ, ಸಂಘಟನೆಗಳು ಹಳೆಗನ್ನಡದ ಪುನರುಜ್ಜೀವನಕ್ಕೆ ಈ ತರಹ ನಾಟಕ ಚಟುವಟಿಕೆ ನಡೆಸುವುದು ಶ್ಲಾಘನೀಯ ಎಂದು ಹೇಳಿದರು.
ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ನೀನಾಸಂ ನಿವೃತ್ತ ಪ್ರಾಚಾರ್ಯ ಕೆ.ಜಿ.ಮಹಾಬಲೇಶ್ವರ ಅವರನ್ನು ಅಭಿನಂದಿಸಲಾಯಿತು. ಸಾಗರಿಕ ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಸರಿದಾ ಎಂ. ಭಟ್, ಶರತ್ ಹೆಗ್ಗೋಡು, ರಂಗಕರ್ಮಿ ಸಿ.ಟಿ.ಬ್ರಹ್ಮಚಾರ್, ಸಾಹಿತಿ ಜಯಪ್ರಕಾಶ್ ಮಾವಿನಕುಳಿ ಹಡೆದ ಕೊಡಲಿಗಳು ನಾಟಕ ಪ್ರದರ್ಶನದಲ್ಲಿ ಶುಭಾ ನಾಗರಾಜ್, ಸರಿದಾ, ಜ್ಯೋತಿ, ಅರ್ಚನಾ, ವೀಣಾ, ರೂಪಜಾ, ಉಮಾಮಹೇಶ್ವರ ಹೆಗಡೆ, ಬಿ.ಕೆ.ನಾರಾಯಣಸ್ವಾಮಿ ಇತರರು ಭಾಗವಹಿಸಿದ್ದರು. ಶ್ರೀವತ್ಸ ಗುಡ್ಡೆದಿಂಬ ವಾದ್ಯ ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net