

ಶಿವಮೊಗ್ಗ: ಯಶಸ್ವಿ ಜೀವನಕ್ಕೆ ಸಕಾರಾತ್ಮಕ ಚಿಂತನೆಗಳು ಪೂರಕ. ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ, ಕೌಶಲ ಮತ್ತು ಸೌಜನ್ಯ ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತವೆ ಎಂದು ಬಿಇಒ ರಮೇಶ್ ಹೇಳಿದರು.
ನಗರದ ರಾಷ್ಟ್ರೀಯ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಅವು ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಶಿಕ್ಷಣದ ಪ್ರಾಮುಖ್ಯತೆ ಅರಿಯಬೇಕು. ನಮ್ಮ ಮನೋವೃತ್ತಿ ಆಧಾರದ ಮೇಲೆ ಶಿಕ್ಷಣದ ಪ್ರಯೋಜನ ಪಡೆಯಬಹುದು. ಎನ್‌ಇಎಸ್ ಲಾಭ-ನಷ್ಟದ ಬಗ್ಗೆ ಚಿಂತಿಸದೆ ಮಲೆನಾಡಿನ ಭಾಗಕ್ಕೆ ವಿದ್ಯೆ ದಾಸೋಹ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಎನ್‌ಇಎಸ್‌ನ ಆಜೀವ ಸದಸ್ಯ ಕಿಶೋರ್ ಶಿರ್ನಾಳಿ ಮಾತನಾಡಿ, ಓದಿನ ಜತೆಗೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಪರಿಪೂರ್ಣ ಕಲಿಕೆ ಸಾಧ್ಯ. ಅಂತಹ ಪರಿಪೂರ್ಣತೆಯಿಂದ ಭವಿಷ್ಯದಲ್ಲಿ ಸಾಧಕರಾಗಬಹುದು. ಪಾಲಕರು ಮಕ್ಕಳ ಕಲಿಕೆ ಮೇಲೆ ನಿರಂತರ ಗಮನ ಇರಿಸಬೇಕು. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಉಪಪ್ರಾಚಾರ್ಯ ಚಿಕ್ಕಪೆಂಚಾಲಯ್ಯ, ಸಹಶಿಕ್ಷಕಿ ಮೆಹಬೂಬಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಖತೀಜಾ ತಲ್ ಖುಬ್ರಾ ಇತರರಿದ್ದರು.