ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು; ಡಿಸಿ

11adarshkdga4
Published on

ಮಡಿಕೇರಿ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ವತಿಯಿಂದ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಲು ಹಾಗೂ ಹೊಸ ಹೊಸ ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು ಎಂದು ವಿಜ್ಞಾನ ಕೇಂದ್ರದ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಸೋಸಿಯೇಷನ್ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಸೋಸಿಯೇಷನ್‌ನ ೨೦೨೧-೨೨ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವಿಜ್ಞಾನ ಕೇಂದ್ರದ ರೂಪುರೇಷೆ, ಯೋಜನೆ ಹಾಗೂ ಅಂದಾಜು ವೆಚ್ಚದ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ವಿಜ್ಞಾನದ ಹೊಸ ತಂತ್ರಜ್ಞಾನ ಮತ್ತು ಬೆಳವಣಿಗೆ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯಿಂದ ನಗರದ ಹೊರವಲಯದ ಕಣರ್ಂಗೇರಿ ಗ್ರಾಮದಲ್ಲಿ ೩ ಎಕರೆ ಸ್ಥಳ ಗುರುತಿಸಿ ಈಗಾಗಲೇ ಜಾಗ ಮಂಜೂರುಗೊಳಿಸಲಾಗಿದೆ. ಈ ಸ್ಥಳದಲ್ಲಿ ರೂ.೪ ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ರೂ.೫.೭೫ ಕೋಟಿ ವೆಚ್ಚದಲ್ಲಿ ತಾರಾಲಯ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.


ಜಿಲ್ಲೆಯಲ್ಲಿ ನೂತನ ತಂತ್ರಜ್ಞಾನ ಮತ್ತು ತಾಂತ್ರಿಕ ವಿನ್ಯಾಸದೊಂದಿಗೆ ವಿಜ್ಞಾನ ಕೇಂದ್ರ ನಿರ್ಮಿಸಲು ತಜ್ಞ ತಾಂತ್ರಿಕ ವಿನ್ಯಾಸಕಾರರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಿಡಿಪಿಐ ವೇದಮೂರ್ತಿ, ವಿಜ್ಞಾನ ಕೇಂದ್ರದ ಹಿಂದಿನ ವರ್ಷಗಳ ಲೆಕ್ಕಪತ್ರದ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ವಿಜ್ಞಾನ ಕೇಂದ್ರ ವಾರ್ಷಿಕ ಲೆಕ್ಕಪತ್ರ ಮಂಡಿಸಿದ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ವಿಜ್ಞಾನ ಕೇಂದ್ರ ಸ್ಥಾಪನೆಯ ರೂಪುರೇಷೆ ಕುರಿತು ಮಾಹಿತಿ ನೀಡಿದರು.


ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಅಸೋಸಿಯೇಷನ್ ಎಂಬುದನ್ನು ಇನ್ನು ಮುಂದೆ ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಂಘ ಎಂದು ಬದಲಾಯಿಸಿ ಸಹಕಾರ ಸಂಘಗಳ ಉಪ ನೋಂದಾವಣಾಧಿಕಾರಿ ಕಛೇರಿಯಲ್ಲಿ ನವೀಕರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಿಜ್ಞಾನ ಕೇಂದ್ರದ ಚಟುವಟಿಕೆಗಳನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ವಿಜ್ಞಾನ/ ಕೃಷಿ/ತೋಟಗಾರಿಕಾ ಸಂಶೋಧನಾ ಕೇಂದ್ರಗಳ ಮುಖ್ಯಸ್ಥರು/ ವಿಜ್ಞಾನಿಗಳನ್ನು ವಿಜ್ಞಾನ ಕೇಂದ್ರದ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿಕೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.


ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಉತ್ತಮ ವಿನ್ಯಾಸ ರಚಿಸುವ ಕುರಿತು ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸೀನಪ್ಪ, ಪೊನ್ನಂಪೇಟೆ ಕೂರ್ಗ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಎಂ.ಬಸವರಾಜಪ್ಪ ಮಾಹಿತಿ ನೀಡಿದರು.


ಉದ್ದೇಶಿತ ವಿಜ್ಞಾನ ಕೇಂದ್ರದ ಜಾಗದಲ್ಲಿರುವ ಮರಗಳನ್ನು ಹಾಗೆಯೇ ಉಳಿಸಿಕೊಂಡು ಜಾಗದ ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಡಾ ಎಸ್.ಆಕಾಶ್, ಮೆಡಿಕಲ್ ಕಾಲೇಜಿನ ಡೀನ್ ಡಾ ಕಾರ್ಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ವಿಜ್ಞಾನ ಕೇಂದ್ರ ಸ್ಥಾಪನೆ ಕುರಿತು ಅಭಿಪ್ರಾಯ ತಿಳಿಸಿದರು.


ಅಪ್ಪಂಗಳದ ಕೇಂದ್ರ ಭಾರತೀಯ ಸಾಂಬಾರಬೆಳೆಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಡಾ.ಎಸ್.ಜೆ.ಅಂಕೇಗೌಡ, ಚೆಟ್ಟಳ್ಳಿ ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಡಾ.ಎಸ್.ರಾಜೇಂದ್ರನ್, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಉಪ ನಿರ್ದೇಶಕ ಡಾ.ಕೆ.ಚಂದ್ರಪ್ಪ, ಕಾಫಿ ಮಂಡಳಿಯ ಉಪ ನಿರ್ದೇಶಕ ಡಾ.ವಿ.ಚಂದ್ರಶೇಖರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಜಗತ್ ತಿಮ್ಮಯ್ಯ, ಸಹಾಯಕ ಪ್ರಾಧ್ಯಾಪಕ ವಿಜ್ಞಾನಿ ಡಾ ಜೆ.ಜಿ.ಮಂಜುನಾಥ್‌ರವರು ವಿಜ್ಞಾನ ಕೇಂದ್ರದ ಸ್ಥಾಪನೆ ಕುರಿತು ಅಭಿಪ್ರಾಯ ಮಂಡಿಸಿದರು.


ಗಾಳಿಬೀಡು ನವೋದಯ ಶಾಲೆಯ ಪ್ರಾಂಶುಪಾಲ ಪಂಕಜಕ್ಷಾನ್, ಜಿಲ್ಲಾ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್ ಭಟ್, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಮಧುಕರ್, ಸಿಬ್ಬಂದಿ ರಶ್ಮಿ ಸೇರಿದಂತೆ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net