

ಸಾಗರ: ಪಶ್ಚಿಮಘಟ್ಟದ ಶರಾವತಿ ಕಣಿವೆಯಲ್ಲಿ ನಿರಂತರ ಮಳೆ ಬೀಳುತ್ತಲೇ ಇದೆ. ಮಳೆಯಲ್ಲಿ ಓಡಾಡುವುದೇ ಒಂದು ವಿಶೇಷ ಅನುಭವ. ಇನ್ನು ಮಳೆ ಕಾಡುಗಳಲ್ಲಿ ಹಾವು, ಚೇಳು, ಓತಿಕ್ಯಾತ, ಕಪ್ಪೆ ಹೀಗೆ ಜೀವ ಸಂಕುಲವೇ ಇದೆ. ಪಶ್ಚಿಮಘಟ್ಟದಲ್ಲಿ ಇಂತಹ ಜೀವಿಗಳ ಅಧ್ಯಯನ ಸದ್ದಿಲ್ಲದೇ ನಡೆಯುತ್ತಿದೆ.
ಪರಿಸರ ಪ್ರೇಮಿಗಳು, ವನ್ಯಜೀವಿಗಳ ಬದುಕಿನ ಕುರಿತು ಆಸಕ್ತಿಯುಳ್ಳವರು ಅಧ್ಯಯನ ಮಾಡಿ ಯುವಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮಲೆನಾಡಿನ ಮನೆಗಳಲ್ಲಿ ರಾತ್ರಿ ಮನೆ ಬಾಗಿಲಿನಲ್ಲಿ ಭಾರಿ ಗಾತ್ರದ ಕಪ್ಪೆಗಳು ಬಂದಿರುತ್ತವೆ. ಮಕ್ಕಳು ಕಪ್ಪೆ ಓಡಿಸಲು ಭಯಪಡುತ್ತಾರೆ. ಕಪ್ಪೆ ಗುಟರ್… ಅಂತ ಕೂಗಿ ಹಾರಿ ಬಿಡುತ್ತವೆ.
ದೊಡ್ಡ ಪ್ರಾಣಿಗಳ ಬಗ್ಗೆ ನಮಗೆ ಕುತೂಹಲ ಹೆಚ್ಚಾಗಿ ಗಮನಿಸುತ್ತೇವೆ. ಆದರೆ ಕಪ್ಪೆಯಂತಹ ಸಣ್ಣ ಮತ್ತು ಉಭಯವಾಸಿ ಬಗ್ಗೆ ಕಾಳಜಿ ಮತ್ತು ಅಧ್ಯಯನ ತೀರಾ ಕಡಿಮೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕಪ್ಪೆಗಳ ದಿನಚರಿಗಳನ್ನೇ ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಯುವಜನರಿಗೆ ಕಪ್ಪೆಯ ವಿಷಯ ತಿಳಿಸುವ ಶಿಬಿರಗಳು ಕಪ್ಪೆ ಹಬ್ಬ ಮತ್ತು ಕಪ್ಪೆ ನಡಿಗೆ ಎಂಬ ಶೀರ್ಷಿಕೆಯಲ್ಲಿ ನಡೆಯುತ್ತಿವೆ.
ವಿಜ್ಞಾನಿ ಡಾ. ಕೆ.ವಿ.ಗುರುರಾಜ್ ಮತ್ತು ತಂಡದವರು ಕಪ್ಪೆಗಳ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 3 ವರ್ಷಗಳ ಹಿಂದೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಸಾಗರ ತಾಲೂಕಿನ ಮುಪ್ಪಾನೆಯಲ್ಲಿ ಇಂತಹ ಪ್ರಯತ್ನ ನಡೆದಿತ್ತು.
ವಿಶ್ವವಿಖ್ಯಾತ ಜೋಗ ಜಲಪಾತದ ಸಮೀಪದಲ್ಲಿರುವ ಕಾಳಮಂಜಿ ಗ್ರಾಮದ ಡಾ. ಗಿರೀಶ್ ಜನ್ನೆ ಅನೇಕ ವರ್ಷಗಳಿಂದ ಶರಾವತಿ ಕಣಿವೆಯಲ್ಲಿ ಕಪ್ಪೆಗಳ ಅಧ್ಯಯನ ನಡೆಸುತ್ತಿದ್ದಾರೆ. ಇವರು ಜತೆಗೆ ಆಸಕ್ತ ಯುವಜನರ ತಂಡ ಕಟ್ಟಿಕೊಂಡು ಇರುಳು ಹೊತ್ತಿನಲ್ಲಿ ಕಾಡಿನ ದಾರಿಗಳಲ್ಲಿ ತಿರುಗುತ್ತಿದ್ದಾರೆ.
ಪರಿಸರದ ಜೀವಿಗಳ ಆವಾಸ ಸ್ಥಾನದ ಬಗ್ಗೆ ಅಧ್ಯಯನ ನಡೆಸಿ ದಾಖಲಿಸುವ ತಂಡದಲ್ಲಿ ಪ್ರದೀಪ್ ಕಲ್ಲಳ್ಳಿ, ಈಶಾನ್ಯ ಶರ್ಮಾ, ಕೌಂಡಿನ್ಯ, ಸವಿನಯ ಮಾಲ್ವೆ ಎಂಬ ಯುವಜನರ ತಂಡ ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ ತಿರುಗುತ್ತಿದೆ.
ಮಳೆಕಾಡು ಹಾಗೂ ಅಲ್ಲಿನ ಜೀವಿಗಳ ಬಗ್ಗೆ ಈಗಿನ ಜನರಿಗೆ ತಿಳಿದಿರುವುದು ಕಡಿಮೆ. ಕಾಲ ಕಳೆದಂತೆ ಕಾಗೆ, ಗುಬ್ಬಿಗಳು ನಿಧಾನವಾಗಿ ಮಾಯವಾಗುತ್ತಿವೆ. ಗೂಬೆ ಅಪರೂಪವಾಗಿದೆ. ಪಾರಿವಾಳಗಳು ಕಾಣಿಸುತ್ತಿಲ್ಲ. ಕೆರೆ ದಂಡೆ ಮೇಲೆ, ಪರಿಸರದಲ್ಲಿ ನಮಗೆ ಸಾವಿರಾರು ಸಂಖ್ಯೆಯಲ್ಲಿ ಕಾಣಿಸುತ್ತಿದ್ದ ಕಪ್ಪೆಗಳು ಕ್ರಿಮಿನಾಶಕ ಮತ್ತು ಔಷಧಗಳ ಸಿಂಪಡೆಯಿಂದ ಕಣ್ಮರೆಯಾಗುತ್ತಿವೆ. ನಾನಾ ಕಾರಣಕ್ಕೆ ಕಾಡು ಕಡಿಮೆಯಾಗುತ್ತಿದೆ. ಪ್ರಾಣಿಗಳ ಆವಾಸಸ್ಥಾನಗಳು ಮುಚ್ಚಿಹೋಗುತ್ತಿವೆ. ಈ ದಿಸೆಯಲ್ಲಿ ಪಶ್ಚಿಮಘಟ್ಟದ ಜೀವಸಂಕುಲ ಉಳಿಸಿಕೊಳ್ಳುವ ಸಣ್ಣ ಪ್ರಯತ್ನ ನಡೆಯುತ್ತಿದೆ.
ಪ್ರಭೇದಗಳ ಗುರುತಿಸುವಿಕೆ: ಈಗಾಗಲೇ ಶರಾವತಿ ಕಣಿವೆಯಲ್ಲಿ ಹಲವಾರು ಪ್ರಭೇದದ ಕಪ್ಪೆಗಳನ್ನು ಗುರುತಿಸಿ ಅವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಮರಗಪ್ಪೆ, ಕೊಟ್ಟಿಗೆಹಾರದ ನೃತ್ಯ ಕಪ್ಪೆ, ಅಂಬೋಲಿ ಪೊದೆಗಪ್ಪೆ, ಜೋಗ್ ಇರುಳುಗಪ್ಪೆ, ಪೊದೆಗಪ್ಪೆ, ತೊರಗಪ್ಪೆ, ಮರಗಂತಿಕಪ್ಪೆ ಹೀಗೆ ವಿವಿಧ ಬಗೆಯ ಕಪ್ಪೆಗಳ ಅಧ್ಯಯನ ಕೌತುಕ ಮೂಡಿಸುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಜಲಮೂಲಗಳನ್ನು ಬತ್ತಿಸುತ್ತಿದ್ದೇವೆ. ಕೃಷಿ ಕೆಲಸಕ್ಕಾಗಿ ಗುಡ್ಡದಲ್ಲಿ ಹರಿದುಬರುವ ಅಬ್ಬೆ ನೀರಿಗೆ ಪೈಪ್ ಅಳವಡಿಸಿ ಕಪ್ಪೆಯ ನೆಲೆಗಳನ್ನೇ ಕಸಿದುಕೊಳ್ಳುತ್ತಿದ್ದೇವೆ. ಪರಿಸರಸ್ನೇಹಿ ಮತ್ತು ಜೈವಿಕ ಗಡಿಯಾರದ ಆಲೋಚನಾ ಕ್ರಮವಿರುವ ಕಪ್ಪೆ ಉಳಿಸಿಕೊಳ್ಳುವಲ್ಲಿ ಡಾ. ಗಿರೀಶ್ ಜನ್ನೆ ಮತ್ತು ತಂಡ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದೆ. ಮುಂಗಾರುಮಳೆ ಸುರಿಯುತ್ತದೆ ಎಂದು ನಮಗೆ ಸಂದೇಶ ಕಳಿಸುವ ಗುಟರ್ ಗುಟರ್ ಎನ್ನುವ ಕಪ್ಪೆಗಳನ್ನು ಉಳಿಸಿಕೊಳ್ಳುವ ಗಟ್ಟಿ ಪ್ರಯತ್ನಗಳು ಆಗಬೇಕಿದೆ. ಡಾ. ಗಿರೀಶ್ ಜನ್ನೆ ರಾಜ್ಯದ ವಿವಿಧ ಮೂಲೆಗಳಲ್ಲಿ ಮಲೆನಾಡಿನ ಸೂಕ್ಷ್ಮ ಮತ್ತು ಸಣ್ಣ ಜೀವಿಗಳ ಕುರಿತು ಅಧ್ಯಯನ ಶಿಬಿರ ನಡೆಸುತ್ತಿದ್ದಾರೆ.
ಅಧ್ಯಯನದಲ್ಲಿ ಗಮನಿಸಿದಂತೆ 250ಕ್ಕೂ ಹೆಚ್ಚು ಕಪ್ಪೆ ಪ್ರಭೇದಗಳಿವೆ. ಶೇ.85ರಷ್ಟು ಜೀವಿಗಳು ಪಶ್ಚಿಮಘಟ್ಟದಲ್ಲೇ ಇವೆ. ದೊಡ್ಡ ಪ್ರಾಣಿಗಳ ಚರ್ಚೆ ನಡೆಯುತ್ತದೆ. ಆದರೆ ಕಪ್ಪೆಯಂತಹ ಪರಿಸರಸ್ನೇಹಿ ಜೀವಿಗಳನ್ನು ಕಡೆಗಣಿಸುತ್ತೇವೆ. ಅಧ್ಯಯನಕ್ಕೂ ಪ್ರಾಮುಖ್ಯತೆ ನೀಡುತ್ತಿಲ್ಲ. ಯುವಜನರ ತಂಡ ಶರಾವತಿ ಕಣಿವೆಯ ಕಪ್ಪೆಗಳ ಆವಾಸ ಸ್ಥಾನಗಳ ಅಧ್ಯಯನ ಮಾಡಿ ಅವುಗಳ ಮಹತ್ವ ದಾಖಲಿಸುತ್ತಿದೆ. ಶಾಲಾ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಳೆಕಾಡುಗಳಲ್ಲಿನ ಕಪ್ಪೆಗಳ ಮಹತ್ವ ಪರಿಚಯಿಸುತ್ತಿದ್ದೇವೆ ಎನ್ನುತ್ತಾರೆ ಡಾ. ಗಿರೀಶ್ ಜನ್ನೆ.