ಕರ್ನಾಟಕದಲ್ಲಿ ಒನ್ ಹೆಲ್ತ್ ಯೋಜನೆ: ಮಲೆನಾಡಿನಲ್ಲಿ ಕೆಎಫ್​ಡಿ ಅಧ್ಯಯನ

sdffggh
Published on

|ಅರವಿಂದ ಅಕ್ಲಾಪುರ ಶಿವಮೊಗ್ಗ

ಕರೊನಾ ನಂತರ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ಮೂಲಕ ಹರಡುವ ಕೆಲವು ಮಾರಣಾಂತಿಕ ಕಾಯಿಲೆಗಳ ಬಗ್ಗೆ ಬೇರು ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲು ಒನ್ ಹೆಲ್ತ್ ಯೋಜನೆ ರೂಪಿಸಿದೆ. ಕರ್ನಾಟಕದಲ್ಲೂ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೇಂದ್ರ ಪಶುಸಂಗೋಪನಾ ಇಲಾಖೆ ಮೂಲಕ ಜಾರಿಗೊಳಿಸಲಾಗಿದೆ.

ಹಲವು ದಶಕಗಳಿಂದ ಮಲೆನಾಡು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಜನರನ್ನು ಕಾಡುತ್ತಿರುವ ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್), ಇತ್ತೀಚಿನ ವರ್ಷಗಳಲ್ಲಿ ಆತಂಕ ಮೂಡಿಸಿರುವ ಅಂಥ್ರಾಕ್ಸ್, ಬ್ರುಸಿಲೋಸಿಸ್ ಬಗ್ಗೆ ತಜ್ಞರ ತಂಡ ಸ್ಥಳೀಯರನ್ನು ಸಂರ್ಪಸಿ ಅಧ್ಯಯನ ನಡೆಸಲಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಂಥ್ರಾಕ್ಸ್ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಬ್ರುಸಿಲೋಸಿಸ್ ಕುರಿತು ಅಧ್ಯಯನ ನಡೆಯಲಿದೆ.

ಜೂನ್​ನಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆ ಆರಂಭಗೊಂಡಿದ್ದು, ಕೆಎಫ್​ಡಿ ಕುರಿತ ಅಧ್ಯಯನ ಶುರುವಾಗಿದೆ. ಪ್ರಾಣಿಶಾಸ್ತ್ರಜ್ಞ ಬೆಂಗಳೂರಿನ ಡಾ. ಪ್ರಕಾಶ್ ನೇತೃತ್ವದ ತಂಡ ಸಾಗರ ತಾಲೂಕಿನ ಅರಳಗೋಡು ಹಾಗೂ ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಈ ತಂಡದಲ್ಲಿ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಡಾ. ವಿನಯ್ ಇದ್ದಾರೆ.

ಕೆಎಫ್​ಡಿಗೆ ಬಂತು ಬಲ: ಅಂಥ್ರಾಕ್ಸ್ ಹಾಗೂ ಬ್ರುಸಿಲೋಸಿಸ್ ಕಾಯಿಲೆಗಿಂತಲೂ ವೈದ್ಯರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಿರುವುದು, ಜನರನ್ನು ಭಯದಲ್ಲಿ ಬದುಕುವಂತೆ ಮಾಡಿರುವುದು ಕೆಎಫ್​ಡಿ. ಎಷ್ಟೇ ಪ್ರಯತ್ನ ಮಾಡಿದರೂ ಈ ವೈರಾಣು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಣೆಯಾಗುತ್ತಿದೆ.

ಬೇಸಿಗೆ ಅವಧಿಯಲ್ಲಿ ವ್ಯಾಪಕವಾಗಿ ಹರಡುವ ಕೆಎಫ್​ಡಿ ವೈರಾಣು ಕಾಡಂಚಿನಲ್ಲಿ ವಾಸಿಸುವ ಜನರಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಸಾಗರ, ತೀರ್ಥಹಳ್ಳಿ ತಾಲೂಕಿನ ಕೆಲವು ಗ್ರಾಮಗಳ ಜನರು ಹಲವು ವರ್ಷಗಳಿಂದ ಕೆಎಫ್​ಡಿ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಇದೀಗ ಕೆಎಫ್​ಡಿ ಕುರಿತು ಬೇರು ಮಟ್ಟದಲ್ಲಿ ಜನರನ್ನು ಸಂರ್ಪಸಿ ಮಾಹಿತಿ ಸಂಗ್ರಹಿಸುವುದರಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ಲೋಕಕ್ಕೆ ಅನುಕೂಲವಾಗಲಿದೆ.

ವಿವಿಧ ಆಯಾಮ: ವೈರಾಣು ವ್ಯಾಪಕವಾಗಿ ಹರಡದಂತೆ ನಿಗಾವಹಿಸುವುದು, ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆ ಮಾಡುವುದು, ಅಂಕಿಅಂಶಗಳ ಸಂಗ್ರಹಣೆ ಮಾಡುವುದು ಈ ಯೋಜನೆಯ ವಿವಿಧ ಆಯಾಮಗಳಾಗಿವೆ. ಅಧ್ಯಯನ ನಡೆಸಿ ಸಂಗ್ರಹಿಸಲಾದ ಮಾಹಿತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ.

ಮಾಹಿತಿ ಸಂಗ್ರಹ: ಕೆಎಫ್​ಡಿ ವೈರಾಣು ತೀವ್ರಗೊಂಡ ಸಂದರ್ಭದಲ್ಲಿ ಸುತ್ತಲಿನ ಪರಿಸರದಲ್ಲಿ ಉಂಟಾದ ಬದಲಾವಣೆಗಳು, ವೈರಾಣು ವಾಹಕಗಳಾದ ಮಂಗಗಳ ವರ್ತನೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೆಎಫ್​ಡಿ ವೈರಸ್ ಮಾನವನ ದೇಹದ ಮೇಲೆ ಬೀರುವಷ್ಟು ಪರಿಣಾಮ ಮಂಗಗಳ ಮೇಲೆ ಬೀರುವುದಿಲ್ಲ. ಮಂಗಗಳೇ ವೈರಸ್ ವಾಹಕಗಳಾದರೂ ಒಂದೆರಡು ಮಂಗಗಳು ಮಾತ್ರ ಸಾವನ್ನಪ್ಪುತ್ತವೆ. ಈ ವಿಷಯ ತಜ್ಞರ ಪಾಲಿಗೆ ತೀವ್ರ ಕುತೂಹಲ ಮೂಡಿಸಿದೆ. ಹೀಗಾಗಿ ಇದರ ಬಗ್ಗೆಯೂ ಅಧ್ಯಯನ ನಡೆಯಲಿದೆ.

ಔಷಧಕ್ಕೆ ಪೂರಕ: ಕೆಎಫ್​ಡಿ ವೈರಸ್ಸನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಪರಿಣಾಮಕಾರಿ ಚಿಕಿತ್ಸೆ ನೀಡುವುದು ಸಾಧ್ಯವಾಗದ ಕಾರಣ ಅನೇಕರು ಮೃತಪಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕೆಎಫ್​ಡಿ ಅಧ್ಯಯನ ಸಂದರ್ಭದಲ್ಲಿ ವೈರಸ್ ಪತ್ತೆ, ಕಾಯಿಲೆ ತಡೆಗಟ್ಟುವ ವಿಧಾನದಲ್ಲಿ ಪರಿಣಾಮಕಾರಿ ಬದಲಾವಣೆಗಳು ಹಾಗೂ ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಸಮರ್ಪಕ ಮಾಹಿತಿ ನೀಡುವಂತೆ ತಜ್ಞರ ತಂಡಕ್ಕೆ ಸೂಚನೆ ನೀಡಿದೆ.

ಮುಂದಿನ ದಿನಗಳಲ್ಲಿ ಪ್ರವಾಸ: ಈಗಾಗಲೇ ಎರಡು ಗ್ರಾಮಗಳಿಗೆ ಭೇಟಿ ನೀಡಿರುವ ತಜ್ಞರು ಮುಂದಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕೆಎಫ್​ಡಿ ತೀವ್ರವಾಗಿ ಕಾಣಿಸಿಕೊಂಡ, ಹೆಚ್ಚು ಸಾವುಗಳು ಸಂಭವಿಸಿದ ಗ್ರಾಮಗಳಿಗೂ ಭೇಟಿ ಕೊಡಲಿದ್ದಾರೆ. ಅಲ್ಲಿನ ಜನರೊಂದಿಗೆ ಸಂವಹನ ನಡೆಸಿ ಅಧ್ಯಯನ ವರದಿ ಸಿದ್ಧಪಡಿಸುತ್ತಾರೆ. ಅದನ್ನು ಆಧರಿಸಿ ಸರ್ಕಾರದ ಮಟ್ಟದಲ್ಲಿ ನೀತಿ ರೂಪಿಸಲಾಗುತ್ತದೆ.

ಅಧ್ಯಯನ ಹೇಗೆ?

ಇಷ್ಟು ವರ್ಷ ಕೆಎಫ್​ಡಿಯಿಂದ ತೀವ್ರ ಸಂಕಷ್ಟ ಎದುರಿಸಿದ ಪ್ರದೇಶಗಳಲ್ಲಿ ಜಾನುವಾರುಗಳು ಮಾತ್ರ ವೈರಸ್ ದಾಳಿಗೆ ತುತ್ತಾಗದಿರುವುದು ತಜ್ಞರಲ್ಲಿ ಆಶ್ಚರ್ಯ ಮೂಡಿಸಿದೆ. ಇದಕ್ಕೆ ಕಾರಣವೇನು? ಜಾನುವಾರುಗಳಲ್ಲಿ ಅಂತಹ ರೋಗ ನಿರೋಧಕ ಶಕ್ತಿ ಇದೆಯೇ? ಅಥವಾ ವೈರಸ್ ಅಷ್ಟೊಂದು ದುರ್ಬಲವೇ? ಎಂಬ ಬಗ್ಗೆ ಸಂಶೋಧನೆ ನಡೆಯಲಿದೆ. ಕೆಎಫ್​ಡಿ ಎಷ್ಟು ದಿನದಲ್ಲಿ ಉಲ್ಬಣಗೊಂಡಿತು? ವೈರಸ್ ಪತ್ತೆಯಾದ ಬಳಿಕ ಜನರು ಎದುರಿಸಿದ ಆರೋಗ್ಯ ಸಮಸ್ಯೆಗಳೇನು? ಕಾಯಿಲೆಯಿಂದ ಜನರು ಗುಣಮುಖರಾಗಲು ಎಷ್ಟು ಅವಧಿ ಬೇಕಾಗಿತ್ತು? ಎಂಬ ವಿಷಯಗಳ ಕುರಿತು ತಜ್ಞರು ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net