

ಬೆಂಗಳೂರು: ಕೌಟುಂಬಿಕ ಕಲಹದಿಂದ ವಿದ್ಯಾರ್ಥಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಶ್ರಾವ್ಯ (೧೯) ಆತ್ಮಹತ್ಯೆ ಮಾಡಿಕೊಂಡವರು.
ಮೃತ ಶ್ರಾವ್ಯ, ತಂದೆ ದೊಡ್ಡ ನರಸಿಂಹ ಮೂರ್ತಿ, ತಾಯಿ ಸುಮಾ ಅವರೊಂದಿಗೆ ಚಾಮರಾಜಪೇಟೆಯ ಮೂರನೇ ಮುಖ್ಯರಸ್ತೆಯಲ್ಲಿ ವಾಸವಾಗಿದ್ದರು. ನಗರದ ಆರ್‌ಎನ್‌ಎಸ್ ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ವ್ಯಾಂಸಂಗ ಮಾಡುತ್ತಿದ್ದರು. ಶುಕ್ರವಾರ ಬೆಡ್‌ಶೀಟ್ ವಿಚಾರವಾಗಿ ಅಕ್ಕನೊಂದಿಗೆ ಜಗಳವಾಡಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಪಾಲಕರು ಶ್ರಾವ್ಯ ಅವರಿಗೆ ಬೈದು ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಶ್ರಾವ್ಯ ರಾತ್ರಿ ಎಲ್ಲರು ಮಲಗಿದ್ದ ವೇಳೆಯಲ್ಲಿ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶನಿವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸುದ್ದಿ ತಿಳಿದು ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.