

ತೀರ್ಥಹಳ್ಳಿ: ತುರ್ತುಸ್ಥಿತಿಯ ಕರಾಳ ಅಧ್ಯಾಯ ಈ ದೇಶದಲ್ಲಿ ಮರುಕಳಿಸದಿರಲು ಅದರ ಭೀಕರತೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಪುತ್ತೂರು ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಡಗೋಲು ವಿಚಾರ ಮಂಥನ ವೇದಿಕೆಯಿಂದ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಭುಗಿಲು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಹಿಂದುಗಳಿಗೆ ಪೂರ್ಣ ಸ್ವಾತಂತ್ರೃ ಸಿಗುವವರೆಗೂ ಹೋರಾಟ ಮುಂದುವರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭ ನಡೆದ ಹೋರಾಟ ಹಾಗೂ ಸರ್ಕಾರದ ಸರ್ವಾಧಿಕಾರಿ ಆಡಳಿತವನ್ನು ಜನರು ವಿರೋಧಿಸುವಂತೆ ಮಾಡಬೇಕಿತ್ತು. ಅದಕ್ಕಾಗಿ ಹೋರಾಟಗಾರರು ಭೂಗತರಾಗಿ ಗುಹೆಯಲ್ಲಿ ಪತ್ರಿಕೆ ಮುದ್ರಿಸಿ ಹಂಚಿ ಸಂಘಟನೆ ನಡೆಸಿದ ಘಟನೆಯನ್ನು ಎಳೆಎಳೆಯಾಗಿ ಮತ್ತು ಸ್ವಾರಸ್ಯಕರವಾಗಿ ವಿವರಿಸಿದರು.
ಇಂದಿರಾ ಗಾಂಧಿ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಸುತ್ತಲಿನ ದುಷ್ಟಕೂಟದ ಸಲಹೆಯನ್ನು ಆಧರಿಸಿ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದು ಮಾತ್ರವಲ್ಲದೆ 1975ರ ಜೂ.25.ರಂದು ಮಧ್ಯರಾತ್ರಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ದೇಶದಲ್ಲಿ ಕತ್ತಲೆಯ ಕಾರ್ಮೋಡ ಕವಿಯುವಂತೆ ಮಾಡಿದ್ದರು ಎಂದರು.
ರಾತ್ರಿ ಬೆಳಗಾಗುವಷ್ಟರಲ್ಲಿ ರಾಷ್ಟ್ರ ನಾಯಕರನ್ನು ಜೈಲಿಗಟ್ಟಿದ್ದ ಇಂದಿರಾ ಗಾಂಧಿ ಅವರು ಪತ್ರಿಕಾ ಮಾಧ್ಯಮದ ಕತ್ತನ್ನು ಹಿಸುಕಿ ಇಡೀ ದೇಶದಾದ್ಯಂತ ಭಯದ ವಾತಾವರಣ ಮೂಡಿಸಿದ್ದರು. ಮತ್ತೊಮ್ಮೆ ಗೆಲ್ಲುವ ಭ್ರಮೆಯಲ್ಲಿ 1977ರಲ್ಲಿ ಚುನಾವಣೆ ಘೋಷಣೆ ಮಾಡಿದ್ದು ಈ ದೇಶದ ಅದೃಷ್ಟವಾಗಿತ್ತು ಎಂದು ಹೇಳಿದರು.
ಮಹಾತ್ಮ ಗಾಂಧಿ ಹತ್ತಿರದಲ್ಲಿದ್ದ ಇಂದಿರಾ ಗಾಂಧಿಗೆ ಅವರಿಂದಲೇ ಸರ್ವಾಧಿಕಾರದ ಧೋರಣೆಗೆ ಪ್ರೇರಣೆ ದೊರೆತಿತ್ತು. ಮಾತ್ರವಲ್ಲದೆ ಆರ್‌ಎಸ್‌ಎಸ್ ಬಗ್ಗೆ ಭಯವೂ ಇತ್ತು. ದೇಶ ತುಂಡಾಗುವುದಾದರೆ ನನ್ನ ದೇಹ ತುಂಡಾಗಲಿ ಎಂದಿದ್ದ ಗಾಂಧಿ ಅವರು ಮದ್ಯಪಾನ ವಿರೋಧಿಯಾಗಿದ್ದರು. ಆದರೆ ಅದರ ಪರ ಇದ್ದ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದರು. ತನ್ನ ಅಜ್ಜಿ ನಾಶ ಮಾಡಿದ ಸಂವಿಧಾನವನ್ನು ಈಗ ಮೊಮ್ಮಗ ಸಂವಿಧಾನದ ಪುಸ್ತಕವನ್ನು ಎತ್ತಿ ತೋರಿಸುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಇತಿಹಾಸ ತಿರುಚುವ ಯತ್ನ: ತುರ್ತು ಪರಿಸ್ಥಿತಿ ವಿರುದ್ಧ ಇಡೀ ದೇಶದಲ್ಲಿ ಯುದ್ಧದ ಸಿದ್ಧತೆ ಮಾಡಿದ್ದು ಆರ್‌ಎಸ್‌ಎಸ್. ಆದರೆ ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಯಾಕೆ ಎಂದು ತಿಳಿಯುತ್ತಿಲ್ಲ. ತುರ್ತು ಪರಿಸ್ಥಿತಿ ಬಗ್ಗೆ ಹಲವಾರು ಲೇಖನಗಳು ಪ್ರಕಟವಾಗಿವೆ. ಅದರಲ್ಲಿ ಕೆಲವೇ ಕೆಲವು ದೇಶಭಕ್ತರು ಎಂದು ಹೇಳಲಾಗಿದೆ. ಇದು ಚರಿತ್ರೆಯನ್ನು ತಿರುಚುವ ಯತ್ನ. ಆದರೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಬೇಕು ಎಂದು ಪತ್ರಕರ್ತ ದು.ಗು.ಲಕ್ಷ್ಮಣ್ ಹೇಳಿದರು. ಭುಗಿಲು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಅಧಿಕಾರದಲ್ಲಿ ಕೂತವರು ವ್ಯಾಪ್ತಿಯನ್ನು ಮೀರದಂತೆ ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗೂ ಚಿಂತನೆ ನಡೆಸಬೇಕಿದೆ. ದೇಶಕ್ಕೆ ದೊರೆತ ಎರಡನೇ ಸ್ವಾತಂತ್ರೃದ ಬಗ್ಗೆ ಈಗಿನ ತಲೆಮಾರಿಗೆ ಮನವರಿಕೆ ಮಾಡಲು ಮತ್ತು ಭಾರತವನ್ನು ಭಾರತವಾಗಿ ಉಳಿಸಲು ನಿರಂತರ ಪ್ರಯತ್ನ ಅಗತ್ಯ ಎಂದು ತಿಳಿಸಿದರು.
ಐದು ದಶಕಗಳ ಹಿಂದಿನ ಘಟನೆಗಳನ್ನು ಹೇಳುವಾಗ ಅದು ಕುತೂಹಲ, ರಂಜನೆಯಂತೆ ಕಾಣುತ್ತದೆ. ಆದರೆ ತುರ್ತು ಪರಿಸ್ಥಿತಿಯ ಭೀಕರತೆ ಎದುರಿಸಿದವರ ಪಾಡು ಹೇಳತೀರದು. ಭಾರತ್ ಮಾತಾಕಿ ಜೈ ಎಂದ ಕಾರಣಕ್ಕೆ ನಾನೂ ಜೈಲುವಾಸ ಅನುಭವಿಸಿದ್ದೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ವಿಭಾಗ ಸಂಘ ಚಾಲಕ ದಿನೇಶ್ ಭಾರತಿಪುರ, ಕೆ.ಎಂ.ಜಯಶೀಲ, ಚಕ್ಕೋಡಬೈಲು ಶ್ರೀವತ್ಸ ಇತರರಿದ್ದರು.