ಒಳ್ಳೆತನಕ್ಕೆ ಕರೆದೊಯ್ಯುವ ಬಸವ, ಶರಣ ಸಂಸ್ಕೃತಿ

ಒಳ್ಳೆತನಕ್ಕೆ ಕರೆದೊಯ್ಯುವ ಬಸವ, ಶರಣ ಸಂಸ್ಕೃತಿ
Published on

ಬೆಟ್ಟದಪುರ: ಎಲ್ಲ ಸಮುದಾಯದವರನ್ನು ಸಮಾನವಾಗಿ ಒಳ್ಳೆತನಕ್ಕೆ ಕರೆದುಕೊಂಡು ಹೋಗುವ ಸಂಸಕ್ಕತಿ ಬಸವ ಹಾಗೂ ಶರಣ ಸಂಸ್ಕೃತಿಯಾಗಿದೆ ಎಂದು ಎಡೆಯೂರು ಗದಗ ಡಂಬಳ ಜಗದ್ಗುರು ತೋಂಟದಾರ್ಯ ಮಹಾಸಂಸ್ಥಾನ ಮಠದ ಡಾ.ಶ್ರೀ ತೋಂಟಪ್ಪ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸ್ವತಂತ್ರೃ ಸಲೀಲಾಖ್ಯ ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಭಾನುವಾರ ಆಯೋಜಿಸಿದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿಯ 96ನೇ ಗಣಾರಾಧನೆ, ಶ್ರೀ ಚನ್ನವೀರದೇಶಿಕೇಂದ್ರ ಸ್ವಾಮೀಜಿಯ 43ನೇ ಗಣಾರಾಧನೆ, ಕನ್ನಡ ಮಠದ 215ನೇ ಸ್ಥಾಪನಾ ವರ್ಷಾಚರಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಣಾರಾಧನಾ ಎಂಬುದು ಕೇವಲ ನಾಮಮಾತ್ರವಾಗಿದ್ದು, ಈ ಆರಾಧನೆಯಲ್ಲಿ ಅಕ್ಷರ ಹಾಗೂ ಜ್ಞಾನ ದಾಸೋಹ ನಡೆಸುವ ಮೂಲಕ ಜನರನ್ನು ನಾಗರಿಕನಾಗಿ ಮಾಡಲಾಗುತ್ತಿದೆ. ಸರಳ ಜೀವನ ಸೂತ್ರವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ ಎಂದರು.

ಮೈಸೂರು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, ಸರ್ಕಾರಗಳು ಮಾಡುವಂತಹ ಸೇವಾ ಕೆಲಸಗಳನ್ನು ಮಠಗಳ ಶ್ರೀಗಳು ಮಾಡುತ್ತಿದ್ದಾರೆ. ಮಠಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ನಾಗರಿಕತೆಯ ಬೆಳವಣಿಗೆ ಹೆಚ್ಚಾಗುತ್ತಿದೆ. ಅಲ್ಲದೆ ಎಲ್ಲ ಸಮುದಾಯಗಳೊಂದಿಗೆ ಸಮಾಜ ಕಟ್ಟುವ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಠಗಳು ಪ್ರಮುಖ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಶ್ರೀ ಮಠವು ನಿರಂತರವಾಗಿ ಸೇವೆ ಮಾಡುತ್ತಿದೆ. ಮಠದ ಆಸ್ತಿ ದುರುಪಯೋಗ ಆಗದಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಸಾವಯವ ಕೃಷಿಯತ್ತ ನಮ್ಮ ಮಠವು ಮುಖ ಮಾಡಿದೆ. ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ತಯಾರು ಮಾಡಿಕೊಂಡು ಕಾರ್ಯರೂಪಕ್ಕೆ ತರಲಾಗಿದೆ. ಜೀವನ ಶೈಲಿ ಬದಲಾವಣೆ ಆದಂತೆ ಮನಷ್ಯನಿಗೆ ನಾಲ್ಕಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ ಆಹಾರ ಮತ್ತು ಕೃಷಿ ಪದ್ಧತಿಗಳ ಬದಲಾವಣೆ ಪ್ರಮುಖವಾಗಿದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಚಿಕ್ಕವೀರದೇಶಿಕೇಂದ್ರ ಹಾಗೂ ಶ್ರೀ ಚೆನ್ನವೀರದೇಶಿಕೇಂದ್ರ ಸ್ವಾಮೀಜಿಯ ಭಾವಚಿತ್ರಗಳನ್ನು ಬೆಳ್ಳಿರಥದ ಮೇಲೆ ಪ್ರತಿಷ್ಠಾಪಿಸಿ, ಕನ್ನಡ ಮಠ ಆವರಣದಿಂದ ಬೆಟ್ಟದಪುರದ ಪ್ರಮುಖ ಬೀದಿಗಳಲ್ಲಿ ಕಲಾತಂಡ, ವೀರಗಾಸೆ ವೃಂದದ ನೃತ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಮಠದ ಎಸ್‌ಸಿವಿಡಿಎಸ್ ವಿದ್ಯಾಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಕಲ್ಪಿಸಲಾಯಿತು.

ಮಲ್ಲನಮೂಲೆ ಮಠದ ಶ್ರೀ ಚನ್ನಬಸವಮಹಾಸ್ವಾಮೀಜಿ, ಹುಳಿಯೂರಿನ ಶ್ರೀ ದ್ವಿತೀಯ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗಶಿವಾನಂದಸ್ವಾಮೀಜಿ, ಕೊಳ್ಳೇಗಾಲದ ಆಲಹಳ್ಳಿ ಮಠದ ಶ್ರೀ ಪಟ್ಟದ ಶಿವಕುಮಾರ ಸ್ವಾಮೀಜಿ, ಬೆಳಗಾಂ ಶ್ರೀ ರುದ್ರಾಕ್ಷಿ ಮಠದ ಶ್ರೀ ಡಾ.ಅಲ್ಲಮ್ಮ ಪ್ರಭು ಸ್ವಾಮೀಜಿ, ಕನ್ನಡ ಮಠದ ಶ್ರೀ ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ, ನಿವೃತ್ತ ಕೆಎಎಸ್ ಅಧಿಕಾರಿ ಸಿ.ಎಂ. ಈಶ್ವರ್, ಪಾರ್ವತಮ್ಮ, ಮುಖಂಡ ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net