

ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ 2008ರ ನವೆಂಬರ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು, ಅದು ಸೃಷ್ಟಿಸಿದ ಆಘಾತವನ್ನು ದೇಶ ಎಂದೂ ಮರೆಯಲು ಸಾಧ್ಯವಿಲ್ಲ. ಮುಂಬೈನ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 166 ಜನರು ಮೃತಪಟ್ಟರು.
ಈ ಕೃತ್ಯ ಪಾಕಿಸ್ತಾನ ಪ್ರಾಯೋಜಿತ ಎಂಬುದು ಸ್ಪಷ್ಟವಾಗಿತ್ತು. ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ವಿಚಾರಣೆ ವೇಳೆ ಪಾಕ್ನ ಕರಾಳತನ ಇನ್ನಷ್ಟು ಸ್ಪಷ್ಟಗೊಂಡಿತ್ತು. ಆದರೆ, ಪಾಕಿಸ್ತಾನ ಮಾತ್ರ ‘ಸಾಕ್ಷ್ಯ ಒದಗಿಸಿ’ ಎಂದು ಸಬೂಬು ಹೇಳುತ್ತಿತ್ತು. ಆಗಿನ ಯುಪಿಎ ಸರ್ಕಾರ ಒದಗಿಸಿದ ಸಾಕ್ಷ್ಯಗಳನ್ನೆಲ್ಲ ನಿರಾಕರಿಸಿ, ತನ್ನ ಪಾತ್ರವಿಲ್ಲ ಎಂದು ಸುಳ್ಳು ಹೇಳಿತು. ಆದರೆ, ಮುಂಬೈ ದಾಳಿಯ ಪ್ರಮುಖ ಸಂಚುಕೋರ ತಹವ್ವುರ್ ರಾಣಾ ಭಾರತಕ್ಕೆ ಗುರುವಾರ ಹಸ್ತಾಂತರಗೊಂಡಿದ್ದು, ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಗೆಲುವು.
ಭಾರತ ಸರ್ಕಾರ ಸತತವಾಗಿ ನಡೆಸಿದ ರಾಜತಾಂತ್ರಿಕ ಪ್ರಯತ್ನಗಳಿಂದ 17 ವರ್ಷಗಳ ಬಳಿಕ ರಾಣಾ ಭಾರತಕ್ಕೆ ಹಸ್ತಾಂತರಗೊಂಡಿದ್ದಾನೆ. ಇದು ಪಾಕಿಸ್ತಾನದ ಮುಖವಾಡವನ್ನು ಮತ್ತೊಮ್ಮೆ ಬಯಲುಗೊಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ರಾಣಾ ವಿಚಾರಣೆಯನ್ನು ಆರಂಭಿಸಿದ್ದು, ಮುಂಬೈ ದಾಳಿಯಲ್ಲಿ ಪಾಕ್ನ ಪಾತ್ರ, ಅಲ್ಲಿ ಭಯೋತ್ಪಾದಕರು ತರಬೇತಿ ಪಡೆದ ಸಂಗತಿಗಳೆಲ್ಲ ತನಿಖೆ ವೇಳೆ ಬಯಲುಗೊಳ್ಳುವ ನಿರೀಕ್ಷೆ ಇದೆ.
ಮುಂಬೈ ದಾಳಿಯ ಮತ್ತೊಬ್ಬ ಪ್ರಮುಖ ಸಂಚುಕೋರ ಡೆೇವಿಡ್ ಕೋಲ್ಮನ್ ಹೆಡ್ಲಿ ಜತೆ ನಂಟು ಹೊಂದಿದ್ದ ರಾಣಾ ಮುಂಬೈ 2008ರ ದಾಳಿಯಲ್ಲಿ ಹತರಾದ ಪಾಕಿಸ್ತಾನದ ಭಯೋತ್ಪಾದಕರಿಗೆ ಯುದ್ಧದಲ್ಲಿನ ಶೌರ್ಯಕ್ಕಾಗಿ ಪಾಕ್ ನೀಡುವ ಅತ್ಯುನ್ನತ ಪ್ರಶಸ್ತಿಯಾದ ‘ನಿಶಾನ್ ಇ ಹೈದರ್’ ನೀಡಬೇಕು ಎಂದು ಹೇಳಿದ್ದ ಎಂಬುದಾಗಿ ಅಮೆರಿಕದ ನ್ಯಾಯ ಇಲಾಖೆಯ ಅಧಿಕೃತ ಹೇಳಿಕೆ ನೀಡಿದೆ.
ಅಲ್ಲದೆ, ‘ಮುಂಬೈ ಉಗ್ರ ದಾಳಿ ಕೃತ್ಯದ ಸಂಬಂಧ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕ ಪೂರ್ಣ ಸಹಕಾರ ನೀಡಲಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ರಾಣಾ ಭಾರತಕ್ಕೆ ಹಸ್ತಾಂತರಗೊಂಡಿರುವುದರಿಂದ ಮುಂಬೈ ದಾಳಿಯಲ್ಲಿ ಪಾಕ್ ಐಎಸ್ಐ ಕೈವಾಡ ಬಯಲಾಗಲಿದೆ ಮತ್ತು ಉಗ್ರವಾದದ ಪೋಷಕ ಪಾಕ್ ವಿಶ್ವರಾಷ್ಟ್ರಗಳ ಎದುರು ಮುಖಭಂಗಕ್ಕೊಳಗಾಗಲಿದೆ.
ಇಷ್ಟೆಲ್ಲ ಪುರಾವೆಗಳು ಇದ್ದರೂ, ಹಲವು ರಾಷ್ಟ್ರಗಳು ಹೇಳುತ್ತಿದ್ದರೂ ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ, ನೆರವು, ತರಬೇತಿ ನೀಡುವುದನ್ನು ಬಿಟ್ಟಿಲ್ಲ. ಹೀಗಾಗಿ, ಪಾಕ್ಗೆ ಪಾಠ ಕಲಿಸಲು ಅದನ್ನು ಜಾಗತಿಕ ಸ್ತರದಲ್ಲಿ ಒಂಟಿಯಾಗಿಸಬೇಕು ಮತ್ತು ಭಯೋತ್ಪಾದಕರಿಗೆ ದೊರೆಯುತ್ತಿರುವ ಆರ್ಥಿಕ ಮೂಲಗಳನ್ನು ಸದೆಬಡಿಯಬೇಕು. ಭಯೋತ್ಪಾದನೆ ವಿರುದ್ಧದ ಸಮರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತವಾಗಿ ನಡೆಯಬೇಕು.
ಉಗ್ರಕೃತ್ಯಗಳನ್ನು ನಿಲ್ಲಿಸುವವರೆಗೂ ಮತ್ತು ಭಯೋತ್ಪಾದಕರ ಶಿಬಿರ ನಾಶಗೊಳಿಸುವರೆಗೂ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸ್ತರದಲ್ಲಿ ಯಾವುದೇ ಆರ್ಥಿಕ, ಸೇನಾ ನೆರವು ಸಿಗದಂತೆ ಕ್ರಮ ಕೈಗೊಂಡಲ್ಲಿ ಮಾತ್ರ ಆ ದುರುಳ ರಾಷ್ಟ್ರ ಪಾಠ ಕಲಿಯಲು ಸಾಧ್ಯ.