ಎಸಿ, ತಹಸೀಲ್ದಾರ್​ಗಳಿಗೆ ಲೋಕಾ ಶಾಕ್​!

karnataka-lokayukta
Published on

ಕೋಲಾರ: ಜಿಲ್ಲೆಯಲ್ಲಿನ ಸೈನಿಕರು, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸದ ಆರೋಪದಡಿ, ಉಪ ವಿಭಾಗಾಧಿಕಾರಿ ಸೇರಿ 6 ತಹಸೀಲ್ದಾರ್​ಗಳ ಮೇಲೆ ರಾಜ್ಯ ಲೋಕಾಯುಕ್ತ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ.

ಸ್ವಾತಂತ್ರ್ಯ ಯೋಧರು ಮತ್ತು ಅವರ ಅವಲಂಬಿತರು, ಹುತಾತ್ಮ ಯೋಧರು ಮತ್ತು ಅವರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರ ಕಲ್ಪಿಸುವಲ್ಲಿ ರ್ನಿಲಕ್ಷ$್ಯ ಮತ್ತು ವಿಳಂಬ ಧೋರಣೆ ತೋರಿದ ಆರೋಪದಲ್ಲಿ ದೂರು ದಾಖಲಾಗಿದೆ.

ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ವಿವಿಧ ಇಲಾಖೆಗಳಿಂದ ಪೂರಕ ಸ್ಪಂದನೆ ದೊರೆಯದೆ, ವಿನಾಕಾರಣ ಅರ್ಜಿದಾರರನ್ನು ಅಲೆದಾಡಿಸಿರುವ ಬಗ್ಗೆಯೂ ದೂರು ಬಂದ ಮೇರೆಗೆ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

* ಯಾರ್ಯಾರ ವಿರುದ್ಧ ದೂರು..?

ಉಪ ವಿಭಾಗಾಧಿಕಾರಿ ಡಾ.ಎಚ್​.ಪಿ.ಎಸ್​.ಮೈತ್ರಿ, ತಹಸೀಲ್ದಾರ್​ಗಳಾದ ಕೋಲಾರ ಡಾ.ಎಂ.ನಯನಾ, ಶ್ರೀನಿವಾಸಪುರ ಸುಧೀಂದ್ರ, ಬಂಗಾರಪೇಟೆ ಹಿಂದಿನ ತಹಸೀಲ್ದಾರ್​ ವೆಂಕಟೇಶಪ್ಪ, ಕೆಜಿಎ್​ ಎಚ್​.ಜೆ.ಭರತ್​, ಮಾಲೂರು ರೂಪಾ, ಮುಳಬಾಗಿಲು ವಿ.ಗೀತಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

* 2 ದಶಕ ಕಳೆದರೂ ದೊರೆಯದ ಸೌಲಭ್ಯ

ಮಂಡ್ಯ ಜಿಲ್ಲೆಯ ಕೆ.ಆರ್​.ಪೇಟೆ ಲಿಂಗಾಪುರ ಬಿ.ಸಿ.ಗೀತಾ ಅವರ ಪತಿ ಎಲ್​.ಬಿ.ಸುಂದರೇಶ್​ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿ ಹುತಾತ್ಮರಾಗಿದ್ದರು. 20 ವರ್ಷಗಳ ಹಿಂದೆ ಶ್ರವಣಹಳ್ಳಿ ಸರ್ವೇ ನಂಬರ್​ ಪೈಕಿ 8 ಎಕರೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸದ ಕಾರಣ, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲೂ ಯೋಧರ ಕುಟುಂಬಗಳಿಗೆ ಅನ್ಯಾಯವಾಗುತ್ತಿರುವುದು ಲೋಕಾಯುಕ್ತ ಗಮನಕ್ಕೆ ಬಂದಿದೆ.

* 50 ವರ್ಷಗಳಿಂದ ನಿರಂತರ ಹೋರಾಟ

ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದ ಸಿಎಂ ಬಡಾವಣೆಯ ಎನ್​.ಕೆ.ಲಲಿತಾಂಬಿಕಾ ಪತಿ ಸ್ವಾತಂತ್ರ್ಯ ಯೋಧರ ಕೋಟಾದಡಿ 1969 ಅ.6ರಂದು ತುಮಕೂರು ತಾಲೂಕಿನ ವಡ್ಡರಹಳ್ಳಿ ಸರ್ವೇ ನಂಬರ್​ ಪೈಕಿ 4 ಎಕರೆ ಜಮೀನು ಸರ್ಕಾರಿಂದ ಮಂಜೂರು ಮಾಡಲಾಗಿರುತ್ತದೆ. ಆದರೆ ಅದು ಕಲ್ಲು ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾಗಿರುವುದಿಲ್ಲ. 50 ವರ್ಷಗಳು ನಿರಂತರವಾಗಿ ಹೋರಾಟ ಮಾಡಿದರೂ ಸರ್ಕಾರದಿಂದ ಮಂಜೂರು ಮಾಡಿರುವುದಿಲ್ಲ. ಆದ್ದರಿಂದ 2021ರ ಮಾರ್ಚ್​ನಲ್ಲಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು.

ಈ ಪ್ರಕರಣಗಳ ಮಾದರಿ ಕೋಲಾರ ಜಿಲ್ಲೆಯಲ್ಲೂ ಸರ್ಕಾರದಿಂದ ದೊರೆಯಬೇಕಾದ ನಿವೇಶನವನ್ನು ನೀಡದೆ ಅಧಿಕಾರಿಗಳು, ಸಿಬ್ಬಂದಿ ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕೂಲಂಕಷ ತನಿಖೆಗಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net