

ಬೆಂಗಳೂರು: ಉಡುಪಿಯ ಶ್ರೀ ಶೀರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಅಪ್ರಾಪ್ತರು ಸನ್ಯಾಸ ಸ್ವೀಕರಿಸಲು, ಮಠಾಧಿಪತಿಯಾಗಲು ಯಾವ ಕಾನೂನಿನಲ್ಲೂ ನಿರ್ಬಂಧವಿಲ್ಲ. ಪ್ರಕರಣದಲ್ಲಿ ಅಪ್ರಾಪ್ತನ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ. 800 ವರ್ಷಗಳಿಗೂ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿಯನ್ನು ಬುಧವಾರ ವಜಾಗೊಳಿಸಿ ತೀರ್ಪು ಪ್ರಕಟಿಸಿದೆ.
ಏನಿದು ವಿವಾದ?: ಶೀರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತರನ್ನು ನೇಮಿಸಿದ ಕ್ರಮ ಪ್ರಶ್ನಿಸಿ ಶಿರೂರು ಮಠ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಕೋರ್ಟ್ಗೆ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರು, ಅಮಿಕಸ್ ಕ್ಯೂರಿ, ಪ್ರತಿವಾದಿಗಳಾದ ಸೋದೆ ವಾದಿರಾಜ ಮಠದ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರು ಪ್ರಕರಣದ ಸಂಬಂಧ ಕಳೆದ ಶುಕ್ರವಾರ ವಾದ ಮಂಡಿಸಿದ್ದರು.
ಅರ್ಜಿದಾರರ ವಾದ: ಅರ್ಜಿದಾರರ ಪರ ವಕೀಲ ಡಿ.ಆರ್. ರವಿ ಶಂಕರ್ ವಾದ ಮಂಡಿಸಿ, ಅಷ್ಟಮಠಗಳಿಗೆ ಪ್ರತ್ಯೇಕ ಭಕ್ತಪರಂಪರೆ ಇದೆ. ಹಾಲಿ ಪೀಠಾಧಿಪತಿ ಶೀರೂರು ಮಠಕ್ಕೆ ನಡೆದುಕೊಳ್ಳುವವರಲ್ಲ. ಅವರ ತಂದೆ ಸೋದೆ ವಾದಿರಾಜ ಮಠದ ಅನುಯಾಯಿಯಾಗಿದ್ದಾರೆ. ವಾದಿರಾಜ ಮಠ ಶೀರೂರು ಮಠದ ಪೀಠಾಧಿಪತಿ ನೇಮಕ ಮಾಡಿದೆ. ಮೇಲಾಗಿ, ಅಪ್ರಾಪ್ತರ ಮೇಲೆ ವೈರಾಗ್ಯ ಹೇರುವುದಾಗಲಿ, ಪೀಠಾಧಿಪತಿ ಹೊಣೆ ಹೊರಿಸುವುದಾಗಲಿ ಮಾಡಬಾರದು. ಪೀಠಾಧಿಪತಿಯಾಗುವವರಿಗೆ ಆಸ್ತಿ ನಿರ್ವಹಣೆಯ ಹೊಣೆಗಾರಿಕೆ ಇರುತ್ತದೆ. ಆದರೆ, ಕಾನೂನಿನಡಿ ಅಪ್ರಾಪ್ತರು ಆಸ್ತಿ ಹೊಣೆಗಾರಿಕೆ ನಿಭಾಯಿಸುವಂತಿಲ್ಲ. ಅಪ್ರಾಪ್ತರ ಪಾಲಕರು ಮಾತ್ರ ಆಸ್ತಿ ನಿರ್ವಹಣೆ ಮಾಡಬಹುದು. ಆದ್ದರಿಂದ, ಅಪ್ರಾಪ್ತರನ್ನು ಶೀರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಉತ್ತರಾಧಿಕಾರಿ ನೇಮಕ ಮಾಡುವ ಅಧಿಕಾರವಿದೆ: ಸೋದೆ ವಾದಿರಾಜ ಮಠದ ಪರ ವಕೀಲರು ವಾದ ಮಂಡಿಸಿ, ಉಡುಪಿಯ ಅಷ್ಟ ಮಠಗಳನ್ನು ದ್ವಂದ್ವ ಮಠಗಳಾಗಿ ನಾಲ್ಕು ಜೊತೆ ಮಾಡಲಾಗಿದೆ. ಶೀರೂರು ಹಾಗೂ ಸೋದೆ ಮಠಗಳೂ ದ್ವಂದ್ವ ಮಠಗಳಾಗಿವೆ. ದ್ವಂದ್ವ ಮಠಗಳಲ್ಲಿ ಯಾವುದೇ ಒಂದು ಮಠದ ಪೀಠಾಧಿಪತಿ ಮೃತಪಟ್ಟಾಗ ಅಥವಾ ಇತರ ಕಾರಣಗಳಿಂದ ಅವರು ಪೀಠಾಧಿಪತಿಯಾಗಿ ಮುಂದುವರಿಯಲು ಸಾಧ್ಯವಾಗದಿದ್ದಾಗ, ಅದಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಎಲ್ಲ ಅಧಿಕಾರ ಮತ್ತೊಂದು ಮಠದ ಪೀಠಾಧಿಪತಿಗೆ ಇರುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ: ಮೊದಲನೇ ಅರ್ಜಿದಾರ ಲಾತವ್ಯ ಆಚಾರ್ಯ ಹಾಗೂ ಎರಡನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ ಶೀರೂರು ಮಠದ ಹಿಂದಿನ ಪೀಠಾಧಿಪತಿಯ ಸಹೋದರರೇ ಆಗಿದ್ದಾರೆ. ಮೂರನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ ಅವರ ಮಗನಾಗಿದ್ದರೆ, ನಾಲ್ಕನೇ ಅರ್ಜಿದಾರ ಲಾತವ್ಯ ಆಚಾರ್ಯ ಅವರ ಮಗನಾಗಿದ್ದಾರೆ. ಶೀರೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಎಲ್ಲರೂ ಸೇರಿ 2020ರ ಡಿಸೆಂಬರ್‌ನಲ್ಲಿ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಲಾತವ್ಯ ಆಚಾರ್ಯ ಅವರ ಮಗನನ್ನು ಮಠದ ಪೀಠಾಧಿಪತಿಯಾಗಿ ಮಾಡಬೇಕೆಂದು ನಿರ್ಧರಿಸಿದ್ದರು. ಅದು ಸಾಧ್ಯವಾಗದೇ ಇದ್ದಾಗ ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ಹಿನ್ನಡೆ ಅನುಭವಿಸಿದ ನಂತರ ಇದೀಗ ಪಿಐಎಲ್ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದು ವಾದಿರಾಜ ಮಠದ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದ್ದರು.
ಲೋಪವಿಲ್ಲ: ಪ್ರಕರಣದ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್.ಎಸ್. ನಾಗಾನಂದ ವಾದ ಮಂಡಿಸಿ, ಸಂವಿಧಾನದ ಪರಿಚ್ಛೇಧ 26ರಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳನ್ನು ನೀಡಲಾಗಿದೆ. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಲಾಗದು. ಶೀರೂರು ಮಠಕ್ಕೆ ಧರ್ಮ ಹಾಗೂ ಸಂಪ್ರದಾಯಗಳ ಪ್ರಕಾರವೇ ಪೀಠಾಧಿಪತಿ ನೇಮಕ ಮಾಡಲಾಗಿದೆ. ಅಪ್ರಾಪ್ತನನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವುದಕ್ಕೆ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಭಾರತೀಯ ಪ್ರೌಢಾವಸ್ಥೆ ಕಾಯ್ದೆ ಪ್ರಕಾರ 18 ವಯಸ್ಸನ್ನು ನಿಗದಿ ಮಾಡಲಾಗಿದೆ. ಆದರೆ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳು ಹಾಗೂ ಶ್ಲೋಕಗಳ ಪ್ರಕಾರ 14 ವಯಸ್ಸು ದಾಟಿದವರು ವಿರಕ್ತಿ ನಿರ್ಧಾರ ಕೈಗೊಳ್ಳಬಹುದು. ಬೌದ್ಧರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಮಠಾಧಿಪತಿಗೆ 17 ವರ್ಷವಾಗಿದೆ. ತಂದೆ ಡಾಕ್ಟರೇಟ್ ಪಡೆದಿದ್ದಾರೆ. ತಾಯಿಯೂ ವಿದ್ಯಾವಂತೆ. ಮಗನೂ ಆಸಕ್ತಿ ಹೊಂದಿದ್ದರಿಂದಲೇ ಸನ್ಯಾಸ ದೀಕ್ಷೆ ನೀಡಲಾಗಿದೆ. ಇದರಲ್ಲಿ ಲೋಪವೇನೂ ಕಂಡುಬರುತ್ತಿಲ್ಲ ಎಂದು ವಿವರಿಸಿದ್ದರು.
ಬಾಲ ಸನ್ಯಾಸ, ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕಾತಿಗೆ ಕಾನೂನಿನ ಅವಕಾಶ, ಅಷ್ಟ ಮಠಗಳ ಪರಂಪರೆ ಕುರಿತು ನಾಲ್ಕು ಗಂಟೆಗೂ ಅಧಿಕ ಸಮಯ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯ ಪೀಠ ವಿಚಾರಣೆಯನ್ನ ಕಳೆದ ಶುಕ್ರವಾರ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು(ಬುಧವಾರ) ತೀರ್ಪು ಪ್ರಕಟಿಸಿದ ಹೈಕೋರ್ಟ್, ಅಪ್ರಾಪ್ತರು ಸನ್ಯಾಸ ಸ್ವೀಕರಿಸಲು, ಮಠಾಧಿಪತಿಯಾಗಲು ಯಾವ ಕಾನೂನಿನಲ್ಲೂ ನಿರ್ಬಂಧವಿಲ್ಲ. ಪ್ರಕರಣದಲ್ಲಿ ಅಪ್ರಾಪ್ತನ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ. 800 ವರ್ಷಗಳಿಗೂ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾ ಮಾಡಿದೆ.