ಹುತಾತ್ಮ ಯೋಧ ಕಾಶೀರಾಯಗೆ ಶೌರ್ಯ ಪ್ರಶಸ್ತಿ: ಪುಲ್ವಾಮದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾಣಬಿಟ್ಟಿದ್ದ ಕನ್ನಡಿಗ

warrior Kashiraya
Published on

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹುತಾತ್ಮ ಯೋಧ ಕಾಶೀರಾಯ ಬಮ್ಮನಹಳ್ಳಿ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.

ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರು ಕಾಶೀರಾಯ ಅವರ ತಾಯಿ ಶಾಂತಾಬಾಯಿ ಶಂಕ್ರಪ್ಪ ಬಮ್ಮನಹಳ್ಳಿ ಮತ್ತು ಅವರ ಪತ್ನಿ ಸಂಗೀತಾ ಅವರಿಗೆ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು.

ಯೋಧ ಕಾಶೀರಾಯ 2021ರ ಜುಲೈ 1ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜತೆ ಹೋರಾಡಿ ವೀರಮರಣ ಹೊಂದಿದ್ದರು. ಕಾಶಿರಾಯರ ಶೌರ್ಯ ಮೆಚ್ಚಿ ಕೇಂದ್ರ ಸರ್ಕಾರ ಮರಣೋತ್ತರ ಪ್ರಶಸ್ತಿ ಘೋಷಿಸಿ ಪ್ರದಾನ ಮಾಡಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೇನಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಾಗ ಅದರ ಮುಂದಾಳತ್ವವನ್ನು 37ರ ಹರೆಯದ ಹವಾಲ್ದಾರ್​ ಕಾಶೀರಾಯ ಬಮ್ಮನಹಳ್ಳಿ ವಹಿಸಿದ್ದರು. ಯೋಧರ ದಾಳಿಯಿಂದಾಗಿ ಉಗ್ರರು ತಾವು ಅಡಗಿರುವಲ್ಲೇ ಉಳಿಯುವಂತಾಗಿತ್ತು. ಉಗ್ರರು ಪ್ರತಿಯಾಗಿ ದಾಳಿ ನಡೆಸಿದಾಗ ಕಾಶೀರಾಯ ಗಾಯಗೊಂಡಿದ್ದರು. ದಾಳಿಯಿಂದ ಹಿಂದಕ್ಕೆ ಸರಿಯದೆ ಕಾಶಿರಾಯ ಅವರು ಉಗ್ರನೊಬ್ಬನ ಎದೆಗೆ ಗುಂಡಿಕ್ಕಿದ್ದರು. ಕಾಶೀರಾಯ ಅವರ ಗುಂಡಿನ ಎದುರೇಟಿಗೆ ಎದುರು ಪಡೆ ನಡುಗಿತ್ತು. ತನ್ನ ಪ್ರಾಣವನ್ನು ಒತ್ತೆಯಿಟ್ಟು ಯೋಧರ ಪಡೆ ರಕ್ಷಿಸಿದ ಹಿನ್ನೆಲೆಯಲ್ಲಿ ಕಾಶಿರಾಯ ಅವರ ಹೆಸರನ್ನು ಮರಣೋತ್ತರ ಶೌರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಕಾಶೀರಾಯ ಅವರ ವೀರಗಾಥೆ ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net