ಸಹಕಾರಕ್ಕಿಂತಲೂ ಸೇವಾ ಭಾವನೆ ದೊಡ್ಡದು

bdvt karunya
ಭದ್ರಾವತಿಯಲ್ಲಿ ಕಾರುಣ್ಯ ದಾರಿದೀಪ ಯೋಜನೆ ಕಾರ್ಯಕ್ರಮವನ್ನು ನಗರಸಭಾ ಸದಸ್ಯ ಬಿ.ಕೆ.ಮೋಹನ್ ಉದ್ಘಾಟಿಸಿದರು. ಎಂ.ಮಣಿ, ಡಾ. ವಿಜಯ್, ಡಾ. ನರೇಂದ್ರ ಬಾಬು, ಕೆ.ಎನ್. ಶ್ರೀಹರ್ಷ ಇತರರಿದ್ದರು.
Published on

ಭದ್ರಾವತಿ: ವೃದ್ಧಾಶ್ರಮಗಳನ್ನು ಹಲವರ ಸಹಕಾರದಿಂದ ಹುಟ್ಟು ಹಾಕಬಹುದು. ಆದರೆ ವೃದ್ಧರ ಸೇವೆ ಮಾಡುವ ಸಮಾಜಮುಖಿ ಕಾರ್ಯ ನಿಜಕ್ಕೂ ಕಷ್ಟ ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.

ನಗರದ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಿಂದ ವಿಐಎಸ್‌ಎಲ್ ಅತಿಥಿ ಗೃಹ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಕಾರುಣ್ಯ ದಾರಿದೀಪ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಕಿ ಸಲಹಿದ ಪಾಲಕರನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದೇ ಕಷ್ಟ. ಇಂತಹ ದಿನಗಳಲ್ಲಿ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವೃದ್ಧರನ್ನು ಪೋಷಿಸುತ್ತಿರುವುದು ಶ್ಲಾಘನೀಯ ಎಂದರು.

ಮಕ್ಕಳು ತಮ್ಮ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸರ್ಕಾರದಿಂದ ಸಾಕಷ್ಟು ಸೌಲಭ್ಯ ದೊರೆಯುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಸಂಸ್ಥೆಯ ನೂತನ ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ನಮ್ಮ ಸಹಕಾರ ನಿರಂತರವಾಗಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಗೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಮಂಜೂರು ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.

ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್ ಮಾತನಾಡಿ, ವೃದ್ಧರು ಅನಾಥರಲ್ಲ. ವೃದ್ಧರನ್ನು ಹೊರಹಾಕುವವರೇ ಅನಾಥರು. ನಿಸ್ವಾರ್ಥದಿಂದ ಎಲ್ಲರೊಡನೆ ಬದುಕುವುದು ಕಲಿತಾಗ ಮಾತ್ರ ಸಮಾಜ ಮುಂದುವರಿಯಲು ಸಾಧ್ಯ ಎಂದರು.

ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ರಾಜು, ನಗರಸಭೆ ಪ್ರಭಾರ ಅಧ್ಯಕ್ಷ ಎಂ.ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ದುಬೈ ಮೋರಿಸ್ ಲೈನ್ ಇಂಜಿನಿಯರಿಂಗ್‌ನ ಜನರಲ್ ಮ್ಯಾನೇಜರ್ ಡಾ. ವಿಜಯ್, ವೈದ್ಯ ಡಾ. ನರೇಂದ್ರ ಬಾಬು, ವಕೀಲ ಕೆ.ಎನ್. ಶ್ರೀಹರ್ಷ, ವಿ.ಟಿ.ಸನ್ ಪವರ್ ಸಲ್ಯೂಷನ್‌ನ ರಮೇಶ್, ಗ್ಯಾರಂಟಿ ಯೋಜನೆ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್.ಮಣಿಶೇಖರ್, ಸೂಡಾ ಸದಸ್ಯ ರವಿಕುಮಾರ್, ತಿಪ್ಪೇಸ್ವಾಮಿ, ರಾಜೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net