

ಮೈಸೂರು: ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ‘ಮೈಸೂರು ಚಲೋ’ ಪಾದಯಾತ್ರೆ ಸಾಗಿದ ರಸ್ತೆ ಉದ್ದಕ್ಕೂ ಜನ ಜಾತ್ರೆಯೇ ಸೇರಿತ್ತು.
ನೂರಡಿ ರಸ್ತೆಯಲ್ಲಿ ಲಕ್ಷ್ಮೀ ಚಿತ್ರ ಮಂದಿರದಿಂದ ಮಹಾರಾಜ ಕಾಲೇಜು ಮೈದಾನದ ವರೆಗೆ, ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸುಣ್ಣದ ಕೇರಿಯ ಮಾಹದೇಶ್ವರ ದೇವಸ್ಥಾನದಿಂದ ಅರಸು ರಸ್ತೆಯ ವರೆಗೆ, ಜೆಎಲ್‌ಬಿ ರಸ್ತೆಯಲ್ಲಿ ಬಲ್ಲಾಳ್ ವೃತ್ತದಿಂದ ಮಹಾರಾಣಿ ಕಾಲೇಜು ವೃತ್ತದವರೆಗೆ, ಬುಲೇ ವಾರ್ಡ್ ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆ ಸೇರಿದಂತೆ ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಜನಸಾಗರ ಇತ್ತು. ಸುತ್ತಮುತ್ತಲ ಜಿಲ್ಲೆಗಳಿಂದ ನಿರೀಕ್ಷೆಗೂ ಮೀರಿದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ‘ಮೈಸೂರು ಚಲೋ’ ಪಾದಯಾತ್ರೆಗೆ ಆಗಮಿಸಿದ್ದರು.
ಕಾರ್ಯಕರ್ತರು ಪಕ್ಷಗಳ ಬಾವುಟ ಹಿಡಿದು, ಕೇಸರಿ ಹಸಿರು ಶಾಲುಗಳನ್ನು ಧರಿಸಿ, ಕೋಲಾರದ ಕಲಾವಿದರು ಅಬ್ಬರದ ನಗಾರಿ ತಮಟೆ ಸದ್ದುಗಳಿಗೆ ಕುಣಿಯುತ್ತ ಸಾಗಿದರು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಗರಣಗಳ ಪ್ಲೆಕಾರ್ಡ್‌ಗಳನ್ನು ಹಿಡಿದು ಘೋಷಣೆ ಮೊಳಗಿಸಿದರು.